Similar ebooks

ವಾಚಕರಿಗೆ ಈ ಪುಸ್ತಕದಲ್ಲಿ ಇಲ್ಲಲ್ಲಿ ಚರ್ವಿತಚರ್ವಣದ ಅನುಭವವಾಗಬಹುದು. ಈ ಉಪನ್ಯಾಸಗಳು ಅನೇಕ ಸಂದರ್ಭಗಳಲ್ಲಿ ಅನೇಕ ವಿಧದ ಗೋಷ್ಠಿಗಳಿಗೆ ಕೊಟ್ಟವಾದ ಕಾರಣ, ಮುಖ್ಯಾಭಿಪ್ರಾಯಗಳು ಆಗಾಗ ಪುನರುಕ್ತವಾಗಿರುವುದು ಸ್ವಾಭಾವಿಕ. ಪುನರುಕ್ತಿಗಳನ್ನೆಲ್ಲ ತೆಗೆದುಹಾಕುವ ಪ್ರಯತ್ನ ಮಾಡಿದ್ದಿದ್ದರೆ ಉಪನ್ಯಾಸಧೋರಣೆಯ ನೈಜತೆಗೆ ಊನವಾಗುತ್ತಿತ್ತೇ ಹೊರತು ಗುಣವೇನೂ ಉಂಟಾಗುತ್ತಿರಲಿಲ್ಲ. ಅದಕ್ಕೆ ಬದಲಾಗಿ ಹೊಸದಾಗಿಯೇ ಬರವಣಿಗೆ ಆಗಬೇಕಾಗುತ್ತಿತ್ತು. ಅದಕ್ಕೆ ಬೇಕಾದ ಬಿಡುವು ನನಗಿಲ್ಲ; ಮತ್ತು ಹೊಸಗ್ರಂಥ ಉದ್ದಿಷ್ಟವಾದದ್ದೂ ಅಲ್ಲ. ವಾಚಕರು ನನ್ನ ಈ ಸಂದರ್ಭವನ್ನರಿತು, ಸಹನೆ ತೋರಬೇಕೆಂದು ಬೇಡುತ್ತೇನೆ. ಸಾಹಿತ್ಯದ ಉಪಕಾರ ಮನೋರಂಜನೆ ಮಾತ್ರವಲ್ಲ; ಅದು ಜೀವನ ಪ್ರಯುಕ್ತವಾದ ಒಂದು ಶಕ್ತಿ–ಮಹಾಶಕ್ತಿ, ಎಂಬುದು ಈ ಗ್ರಂಥದ ಮುಖ್ಯಾಶಯ. ಸಾಹಿತ್ಯಶಕ್ತಿಗೆ ನಿದರ್ಶನಸ್ವರೂಪವಾದ ವಾಲ್ಮೀಕಿ ವ್ಯಾಸರ ಭಾವಚಿತ್ರಗಳ ಜೊತೆಗೆ ಸಾಹಿತ್ಯಶಕ್ತಿಯಿಂದ ಪ್ರೇರಿತನಾಗಿ ಇಂಗ್ಲೆಂಡಿನ ರಾಜ್ಯನಿರ್ವಾಹಮಾಡಿ ಜಗತ್ಪ್ರಸಿದ್ಧನಾದ ಗ್ಲ್ಯಾಡ್‍ಸ್ಟನ್ನಿನ ಭಾವಚಿತ್ರವನ್ನು ಈಗ ಹೊಸದಾಗಿ ಸೇರಿಸಿದೆ. ‘ಸಾಹಿತ್ಯಶಕ್ತಿ’ ಎಂದರೆ ‘ಶಾಸ್ತ್ರದ ಆಸಕ್ತಿ’ ಎಂದು ಯಾರೂ ಅರ್ಥ ಮಾಡಲಾರರು. ವಿಜ್ಞಾನಾದಿಶಾಸ್ತ್ರಗಳು ನಮ್ಮ ದೇಶದಲ್ಲಿ ಅಭಿವೃದ್ಧಿ ಪಡೆಯಬೇಕೆಂದು ಆಶೆಪಟ್ಟುಕೊಂಡಿರುವವರಲ್ಲಿ ನಾನೂ ಒಬ್ಬ.
ಸೌಂದರ್ಯ ತ್ರಿಕೂಟ, ಸಹಿತತೆಯಿಂದ ಸಾಹಿತ್ಯ, ಸಾಹಿತ್ಯ ಸಂಹಿತೆ, ರಸ, ರಸ ಭ್ರಾಂತಿ, ಕಾವ್ಯದ ಕೆಲಸ, ಷೇಕ್ಸ್ ಪಿಯರಿಗೆ ನಮಸ್ಕಾರ, ಮಹಾಭಾರತದ ಪಾತ್ರಗಳು, ಕಾವ್ಯವು ಸ್ವಭಾವೋಲ್ಲಾಸ ಈ ಪ್ರಬಂಧಗಳಲ್ಲಿ ಶ್ರೀ ಡಿ. ವಿ. ಜಿ.ಯವರು ಕಾವ್ಯದ ಸ್ವಭಾವ ರಸಾನುಭವಗಳಿಗೆ ಸಂಬಂಧಪಟ್ಟಂತೆ ವಿಷಯಗಳನ್ನು ವಿವೇಚಿಸಿದ್ದಾರೆ. ಈ ಸಂಗ್ರಹದ ಒಂದು ವಿಶೇಷವೆಂದರೆ ಕಾವ್ಯರಸಾನುಭೂತಿಗೆ ಉದಾಹರಣಪೂರ್ವಕವಾಗಿರುವ ‘ಮಹಾಭಾರತದ ಪಾತ್ರಗಳು’ ಎಂಬ ಅಪೂರ್ವವಾದ ಪ್ರಬಂಧ. ಈ ಪ್ರಬಂಧ ಲೇಖಕರು ಗೀತೋಪನ್ಯಾಸಗಳನ್ನು ಕೊಟ್ಟಾಗ ಅದಕ್ಕೆ ಭೂಮಿಕೆಯಾಗಬೇಕೆಂದು ಬರೆದುಕೊಂಡಿದ್ದ ಟಿಪ್ಪಣಿಗಳ ಸಂಗ್ರಹ. ಈ ಎಲ್ಲ ಪ್ರಬಂಧಗಳು ಈಗಾಗಲೇ ಜನಪ್ರಿಯವಾಗಿರುವ ‘ಸಾಹಿತ್ಯ ಶಕ್ತಿ’, ‘ಜೀವನ ಸೌಂದರ್ಯ ಮತ್ತು ಸಾಹಿತ್ಯ’ ಈ ಚಿರನೂತನ ಪ್ರಬಂಧಗಳ ಸಂಕಲನಕ್ಕೆ ಪೂರಕವಾದ ಗ್ರಂಥವಾಗುತ್ತದೆಯೆಂಬುದರಲ್ಲಿ ಸಂಶಯವಿಲ್ಲ.
ಈಗ ನಾನು ಮೊದಲು ಹೇಳಬೇಕಾಗಿರುವ ಮಾತು ಕೃತಜ್ಞತೆಯದು. ಈ ಪುಸ್ತಕ ಮೊದಲು ಪ್ರಕಟವಾದದ್ದು ೧೯೫೨ರಲ್ಲಿ. ಆಗತಾನೆ ಇಂಡಿಯದ ಈಗಿನ ರಾಜ್ಯನಿಬಂಧನೆಯ ಗ್ರಂಥ ರಾಷ್ಟ್ರಾಧ್ಯಕ್ಷರಿಂದ ರಾಷ್ಟ್ರದ ಪರವಾಗಿ ಅಂಗೀಕೃತವಾಗಿತ್ತು. ನಮ್ಮ ಮಹಾಜನ ರಾಷ್ಟ್ರಕ ತತ್ತ್ವಗಳನ್ನೂ ರಾಜ್ಯಸಂಸ್ಥೆಯ ಅಂಗಗಳನ್ನೂ ತಿಳಿದುಕೊಳ್ಳಲು ಕುತೂಹಲವುಳ್ಳವರಾಗಿರಬಹುದೆಂಬ ಆಶೆ-ಉತ್ಸಾಹಗಳಲ್ಲಿ ಇದನ್ನು ಬರೆದದ್ದು. ಒಂದು ಮಾತನ್ನು ವಿಶೇಷವಾಗಿ ಹೇಳಬೇಕೆನಿಸುತ್ತದೆ. ನಮ್ಮ ದೇಶಕ್ಕೆ ಪ್ರಜಾರಾಜ್ಯ ಕ್ರಮವನ್ನು ತಂದುಕೊಂಡಿದ್ದೇವೆ. ಇದನ್ನು ಆಗಾಗ ಶೋಧಿಸಿ ಕ್ರಮಪಡಿಸುವುದು ಸಾಧ್ಯ. ಆದರೆ, ಜನದಲ್ಲಿ: (೧) ರಾಷ್ಟ್ರಕತತ್ತ್ವ, (೨) ನ್ಯಾಯನಿಷ್ಠೆ, (೩) ನೀತಿದಾರ್ಢ್ಯ, (೪) ಸೌಜನ್ಯ, ಇವು ಇದ್ದಲ್ಲದೆ ಎಂಥ ರಾಜ್ಯವ್ಯವಸ್ಥೆಯೂ ಜನಕ್ಕೆ ಸುವ್ಯವಸ್ಥೆ ಎನಿಸಲಾರದು. ಜನದಲ್ಲಿ ನೀತಿ ಸಂಪತ್ತು ಬೆಳೆದಂತೆ ಅವರ ರಾಜಕೀಯ, ಆರ್ಥಿಕ, ಸಾಮಾಜಿಕ ಸೌಕರ್ಯಗಳು ಬೆಳೆಯುತ್ತವೆ. ಇದಕ್ಕೆಲ್ಲ ಸಾಧಕವಾದದ್ದು: (೧) ರಾಷ್ಟ್ರಕಪ್ರಜ್ಞೆ, (೨) ರಾಜಕೀಯವಿವೇಕ. ಈ ಎರಡು ಗುಣಗಳನ್ನು ಪ್ರಚಾರಪಡಿಸಲು ಈ ಸಣ್ಣ ಪ್ರಯತ್ನ ಸಾಧನವಾಗಲಿ. ರಾಷ್ಟ್ರ-ರಾಷ್ಟ್ರಕ ಸಂಬಂಧದ ಭಾವನೆಯೂ ರಾಷ್ಟ್ರಕ ಕರ್ತವ್ಯವೂ ಸರ್ವಸಾಮಾನ್ಯ ಧರ್ಮದ ಒಂದು ಮುಖ್ಯಾಂಶವೆಂಬ ಭಾವನೆಯು ನಮ್ಮ ದೇಶಕ್ಕೆ ಹೊಸತೆಂದು ಕಾಣುತ್ತದೆ. ಇಂಥಾ ಭಾವನೆಯನ್ನು ಪ್ರಚಾರಪಡಿಸುವುದು ಈ ಗ್ರಂಥದ ಉದ್ದೇಶ.
“ನನ್ನ ಜ್ಞಾಪಕ ಚಿತ್ರಶಾಲೆ” ಯ ಸಂಪುಟಗಳಲ್ಲಿ ಇದು, ಇಂದಿನ ದೇಶಪರಿಸ್ಥಿತಿಯಲ್ಲಿ, ಮಿಕ್ಕ ಸಂಪುಟಗಳಿಗಿಂತ ಕೊಂಚ ಹೆಚ್ಚು ತುರ್ತಿನದೆಂದು ನನಗನ್ನಿಸಿದೆ. ಏಕೆಂದರೆ ಇದರ ವಿಷಯವು ರಾಜಕೀಯ. ನಮ್ಮ ರಾಜಕೀಯವು ಹದಕ್ಕೆ ಬಂದಲ್ಲದೆ ನಮ್ಮ ದೇಶ ಜೀವನದ ಯಾವ ಅಂಶವೂ ಹದಕ್ಕೆ ಬರಲಾರದೆಂದು ನನ್ನ ನಂಬಿಕೆ. ನಮಗೆ ತಕ್ಕ ರಾಜ್ಯಕ್ರಮವೆಂಥಾದ್ದೆಂಬುದನ್ನು ನಾವು ಇನ್ನೂ ಕಂಡುಕೊಳ್ಳಬೇಕಾಗಿದೆ. ಆ ಪ್ರಶ್ನೆಯನ್ನು ವಿಚಾರ ಮಾಡಲಿಚ್ಛಿಸುವವರಿಗೆ ಉಪಯುಕ್ತವಾಗಬಹುದಾದ ಸಾಮಗ್ರಿ ಈ ಪುಸ್ತಕದಲ್ಲಿ ಒಂದಷ್ಟು ಇದ್ದೀತು. ಈ ಗ್ರಂಥದಲ್ಲಿ ದಿವಾನ್ ರಂಗಾಚಾರ್ಯರಿಂದ ನ್ಯಾಪತಿ ಮಾಧವರಾಯರವರೆಗೆ ಮೈಸೂರಿನ ರಾಜ್ಯಾಡಳಿತವನ್ನು ನಡಸಿದ ದಿವಾನರುಗಳ ಗುಣಶೀಲಗಳ, ಆಡಳಿತ ನೀತಿಗಳ ಚಿತ್ರಣವಿದೆ. ಅವರ ಆಡಳಿತದ ಗುರಿಯೇನಾಗಿತ್ತು, ಅವರ ಕಾಲದಲ್ಲಿ ಪ್ರಜೆಗಳು ನೆಮ್ಮದಿಯಿಂದ ಇದ್ದರೆ, ಇಂದಿನ ಸ್ಥಿತಿ ಏನಾಗಿದೆ ಎಂಬುದನ್ನು ವಿವೇಚಿಸುವ, ಜನಮನವನ್ನು ಪ್ರಚೋದಿಸುವ ಪೀಠಿಕಾ ಉಪಸಂಹಾರ ರೂಪವಾದ ಪ್ರಬಂಧಗಳೂ ಇವೆ.
ದೇವರು ಇದ್ದಾನೆಯೆ? ದೇವರು ಎಂಬ ವಸ್ತು ನಿಜವಾಗಿ ಉಂಟೆ ? ದೇವರು ಎಂದರೆ ಏನು ? ಅದರ ಸ್ವರೂಪ ಎಂಥದು ? ಅದರಿಂದ ನಮಗೆ ಆಗಬೇಕಾದ್ದೇನು? ಈ ಜಗತ್ತು ಏಕೆ ಸೃಷ್ಟಿಯಾಯಿತು ? ಇದರ ವ್ಯವಸ್ಥೆಯ ತತ್ತ್ವವೇನು ? ನಾನಾ ಮತಧರ್ಮಗಳ ಮೂಲತತ್ತ್ವವೇನು ? ಇಂಥ ಪ್ರಶ್ನೆಗಳು ಸಾಮಾನ್ಯವಾಗಿ ಅನೇಕರ ಮನಸ್ಸಿನಲ್ಲಿ, ಒಂದಲ್ಲ ಒಂದು ಕಾಲದಲ್ಲಿ, ಕಾಣಿಸಿಕೊಂಡಿರುತ್ತವೆ. ಆದರೆ ಅವುಗಳಿಗೆ ಸರಿಯಾದ ಉತ್ತರ ಕಾಣದೆ ಹಲುಬುವವರು ಬಹು ಮಂದಿ. ಹೀಗೆ ಮನುಷ್ಯನ ಮನದಲ್ಲಿ ಸಾಮಾನ್ಯವಾಗಿ ಉದ್ಭವಿಸುವ ಈ ಗಹನವಾದ ಪ್ರಶ್ನೆಗಳಿಗೆ ಸಾಧ್ಯವಾದ ಮಟ್ಟಿಗೂ ಸರಳವಾದ ಮಾತುಗಳಲ್ಲಿ ಸಮಾಧಾನ ಹೇಳಲು ಪ್ರಯತ್ನಪಟ್ಟಿರುತ್ತಾರೆ, ಶ್ರೀ ಡಿ.ವಿ.ಜಿ. ಇಲ್ಲಿನ ಉತ್ತರಗಳಲ್ಲಿ ಎರಡು ಎಳೆಗಳನ್ನು ಕಾಣಬಹುದು : ಒಂದು ವಿಚಾರಪರವಾದದ್ದು, ತತ್ತ್ವಪ್ರಾಯವಾದದ್ದು; ಇನ್ನೊಂದು ಅವನ್ನು ಸ್ಥಿರಪಡಿಸುವ ಋಷಿವಾಕ್ಯಗಳು; ಕೊನೆಯಲ್ಲಿ ಸಿದ್ಧಾಂತ. ಈ ಪುಟ್ಟ ಪುಸ್ತಕವನ್ನು ಓದುವ ವಾಚಕನು ಇಲ್ಲಿನ ಅಲ್ಪಾವಕಾಶದಲ್ಲಿ ಎಷ್ಟು ವಿಷಯಗಳು ಅಡಕವಾಗಿದೆಯೆಂದು ಅಚ್ಚರಿ ಪಡದಿರಲಾರನು. ಭಾವದ ಸ್ಪಷ್ಟತೆಯೂ ಮಾತಿನ ಸರಳತೆಯೂ ಬೆರಗು ಪಡಿಸುತ್ತವೆ. ಇಲ್ಲಿನ ಬರವಣಿಗೆ ಮುಖ್ಯವಾಗಿ, ಮನಸ್ಸಿಗೆ ಸಮಾಧಾನವನ್ನು ಕೊಡುವಂತಹುದು.
ಮನಸ್ಸು ತಾನೇ ಸ್ವತಂತ್ರವಾಗಿ ಮಾಡುವ ಕಾರ್ಯ ‘ಋತ’. ಆಮೇಲೆ ಅದನ್ನು ಇತರರ ಹೇಳಿಕೆ ದೃಢಪಡಿಸುತ್ತದೆ. ಈ ಸಮರ್ಥನ ಪ್ರಮಾಣಗಳು ಸತ್ಯ. ಎಂದರೇನಾಯಿತು? ಋತವೂ ಸತ್ಯವೂ ಒಟ್ಟುಗೂಡಿದರೆ ನಂಬಿಕೆ ಸ್ಥಿರವಾಯಿತು. ನಡವಳಿಕೆ ನಿಶ್ಚಿತವಾಯಿತು. ಋತವೆಂದರೆ ನೈಜಪ್ರವೃತ್ತಿ, ಸ್ವತಂತ್ರವಾದ ನಡವಳಿಕೆ, ಸ್ವಭಾವಾಭಿವ್ಯಕ್ತಿ. ‘ಋ’ ಎಂಬುದು ಗತಿ ಎಂಬರ್ಥದಲ್ಲಿ; ಗತಿ ಎಂದರೆ ಚಲನೆ. ಮನುಷ್ಯನ ಬದುಕಿನಲ್ಲಿ ದಿನದಿನವೂ ಹೊಸ ಹೊಸ ಸಂದರ್ಭಗಳೂ ಹೊಸ ಹೊಸ ಸನ್ನಿವೇಶಗಳೂ ಬರುತ್ತಿರುವವಷ್ಟೆ. ಅವು ಹೊಸ ಹೊಸ ಪ್ರಶ್ನೆಗಳನ್ನು ಎಬ್ಬಿಸುತ್ತವೆ. ಅಂಥ ಒಂದು ಹೊಸ ಪ್ರಶ್ನೆ ಅಥವಾ ಹೊಸ ಸಂದರ್ಭವೆದ್ದಾಗ ಮನುಷ್ಯನು ಮೊದಲು ತನ್ನ ಮನಸ್ಸಿನ ಒಳಗಡೆ ತಾನಾಗಿ ಹೇಗೆ ಉತ್ತರ ಕೊಡುತ್ತಾನೆ? ಇತರರ ಪ್ರೇರಣೆಯಿಲ್ಲದೆ, ಅನ್ಯಪ್ರಭಾವವಿಲ್ಲದೆ, ತಾನೂ ಯೋಚನೆ ಮಾಡದೆ, ತರ್ಕಿಸದೆ, ತಕ್ಷಣ ಏನು ಜವಾಬು ಕೊಡುತ್ತಾನೆ? ಈ ಮೂಲ ಪ್ರತಿಕ್ರಿಯೆಯೇ ಅವನ ‘ಋತ’. ಹೀಗೆ ಅವನು ತಾನಾಗಿ ತನಗೆ ಕೊಟ್ಟುಕೊಂಡ ಉತ್ತರವನ್ನು ಆ ಬಳಿಕ ಇತರರು ತನಗೆ ಕೊಟ್ಟ ತಿಳಿವಳಿಕೆ ಸಲಹೆಗಳೊಡನೆ ಹೋಲಿಸಿ ನೋಡಿ, ತನ್ನ ಹೊರಗಿನ, ಅನ್ಯರು ಹೇಳುವ ವರದಿಗೂ ತನ್ನೊಳಗಿನ ಋತಕ್ಕೂ ಹೊಂದಾವಣೆಯನ್ನು ಮಾಡಿಕೊಂಡು ತಯಾರು ಮಾಡುವ ನಿಶ್ಚಯವೇ ‘ಸತ್ಯ’. ಸತ್ಯವು ನಮ್ಮ ಜೀವನಕ್ಕೆ ಬೇಕಾಗಿರುವ ಜ್ಞಾನ ಸಂಪತ್ತಿನಲ್ಲಿ ಪ್ರಥಮಾಂಶ. ಋತ ಸತ್ಯಕ್ಕೆ ಆದಿ. ಋತದ ವಾಗ್ರೂಪ ಸತ್ಯ; ಸತ್ಯದ ಕ್ರಿಯಾರೂಪ ಧರ್ಮ.
ಈ ಪುಸ್ತಕದಲ್ಲಿ ವಿಷಯವಾಗಿರುವವರು ಐಶ್ವರ್ಯದಲ್ಲಾಗಲಿ ಪಾಂಡಿತ್ಯದಲ್ಲಾಗಲಿ ಉನ್ನತರಾದವರಲ್ಲಿ; ಬಹುಶಃ ಎಲ್ಲರೂ ಸಾಮಾನ್ಯ ವರ್ಗಕ್ಕೆ ಸೇರಿದವರು; ಆದರೆ ಸಮಾಜದಲ್ಲಿ ನೆಮ್ಮದಿಯನ್ನೂ ಒಳ್ಳೆಯತನವನ್ನೂ ಹರಡುತ್ತಿದ್ದವರು. ನಮ್ಮಲ್ಲಿ ಒಳ್ಳೆಯವರೆಂಬವರು - ಸಾಧು ಸತ್ಪುರುಷರು - ಸಾಮಾನ್ಯವಾಗಿ ಆಡಂಬರದ ಜನವಲ್ಲ. ಎಲ್ಲರಂತೆಯೇ ಇರುತ್ತಾರೆ. ಸಾಧು ಸಜ್ಜನರು ಈ ಅಂತರಾಳದ ನಾಳಗಳಂತೆ. ಅವು ಕಣ್ಣಿಗೆ ಕಾಣಿಸುವುದಿಲ್ಲ ; ಅವುಗಳ ಹರಿವಿನಲ್ಲಿ ಒಂದು ರಭಸವಿರುವುದಿಲ್ಲ. ಎಲ್ಲವೂ ಮಂದವಾಗಿ ಶಾಂತವಾಗಿರುತ್ತದೆ. ನೀರು ತೊಟ್ಟುತೊಟ್ಟಾಗಿ, ಕೊಂಚಕೊಂಚವಾಗಿ ಸ್ರವಿಸುತ್ತದೆ. ನೆಮ್ಮದಿ ಒಳ್ಳೆಯತನ - ಇವೂ ಹಾಗೆ. ಗಾಳಿಗೆ ಬೀಸುತ್ತಿರುವುದು, ನೀರಿಗೆ ಹರಿಯುತ್ತಿರುವುದು, ಬಿಸಿಯನ್ನಾರಿಸುವುದು, ನೈಜವಾಗಿರುವಂತೆ ಪರಸ್ಪರ ಸಹಾಯವೂ ಮನುಷ್ಯರಿಗೆ ನೈಜವಾಗಿರುವ ಒಂದು ಸಂಗತಿಯಾಗಿ ನಡೆಯುತ್ತದೆ. ಈ ಸಾಮಾನ್ಯ ಜನವರ್ಗ ಅಂಥದು. ನೆಲದ ಅಂತರಾಳದ ಊಟೆ-ಚಿಲುಮೆಗಳು ಹೇಗೋ ಮನುಷ್ಯ ಸಮಾಜದಲ್ಲೂ ಸಾಮಾನ್ಯ ಜನವರ್ಗದವರ ಒಳ್ಳೆಯತನ, ಸ್ನೇಹ, ಸೌಹಾರ್ದಗಳು ಸಮಾಜಕ್ಕೆ ಹಾಗೆ. ಹೀಗೆ ಬಾಳಿದ ಕೆಲವರನ್ನು ಕುರಿತು ನೆನಪುಗಳನ್ನು ಈ ಪುಟಗಳಲ್ಲಿ ಚಿತ್ರಿಸಿದೆ. ಪ್ರೀತಿಯೇ ಸೌಂದರ್ಯ, ಪ್ರೀತಿ ಸಾಲದ ದೇಶದಲ್ಲಿ ಆಭರಣ ಅಲಂಕಾರ ಐಶ್ವರ್ಯಗಳು ಬರಿಯ ಭಾರ. ಪ್ರೀತಿಯೇ ಐಶ್ವರ್ಯ. ಪ್ರೀತಿಯೆಂದರೆ ಹೃದಯ ವಿಕಾಸ - ಇದೇ ಶ್ರೀ ಡಿ.ವಿ.ಜಿ.ಯವರ ಜೀವನದ ಸಂದೇಶವೆಂದು ಇಟ್ಟುಕೊಳ್ಳಬಹುದಾಗಿದೆ.
‘ತಿಲೋತ್ತಮೆ’ ನಾಟಕದ ಮೂಲ ಭಾಗ ಪ್ರಕಟವಾದದ್ದು ಕರ್ಣಾಟಕ ಸಾಹಿತ್ಯ ಪರಿಷತ್ಪತ್ರಿಕೆಯ ೧೯೨೧ರ ಏಪ್ರಿಲ್‍ ತಿಂಗಳ ಸಂಚಿಕೆಯಲ್ಲಿ : ಆಗ ಅದರ ಸಂಪಾದಕರಾಗಿದ್ದ ಕೀರ್ತಿಶೇಷ ಪ್ರೊ ॥ ಬೆಳ್ಳಾವೆ ವೆಂಕಟನಾರಣಪ್ಪನವರ ಪ್ರೇರಣೆ-ಪ್ರೋತ್ಸಾಹಗಳಿಂದ. ಅವರು ಅದನ್ನು ಮೆಚ್ಚಿಕೊಂಡಿದ್ದರೆಂದು ಸ್ವತಃ ವ್ಯಕ್ತವಾಗುತ್ತದೆ. ಅವರ ಮೆಚ್ಚಿಕೆ ನನಗೆ ಒಂದು ಭಾಗ್ಯ. ಆಗ ಪರಿಷತ್ತಿನ ಪಂಡಿತರಾಗಿದ್ದ ವೇ ॥ ತೋಗೆರೆ ನಂಜುಡಶಾಸ್ತ್ರಿಗಳು ಮತ್ತು ವೇ ॥ ಕಡಬದ ನಂಜುಂಡಶಾಸ್ತ್ರಿಗಳು ಇದನ್ನು ಒಪ್ಪಿಕೊಂಡಿದ್ದರು. ಇದು ನನಗೆ ಸಂತೋಷದ ವಿಷಯವೇ. ಇದಕ್ಕಿಂತ ಮುಖ್ಯವಾಗಿ, ಮಿತ್ರರಾದ ಟಿ.ಪಿ. ಕೈಲಾಸಂ ಅವರು ಈ ಕೃತಿಯಲ್ಲಿ ಏನೋ ಸ್ವಾರಸ್ಯವನ್ನು ಕಂಡು ಅದನ್ನು ಪದೇ ಪದೇ ಉದಾಹರಿಸುತ್ತಿದ್ದರು. ಹೀಗೆ ಇದಕ್ಕೊಂದು ಬೆಲೆ ಬಂತು. ಆದರೆ, ಈಗಿನ ಕಾಲದಲ್ಲಿ, ಬಹು ವರ್ಷ ಕಳೆದ ಬಳಿಕ—ಇಂದಿನ ನವನಾಗರಿಕ ಮಹನೀಯರಿಗೆ ಈ ಹಳೆಯ ಕಾಲದ್ದು ಎಷ್ಟು ಮಾತ್ರ ಹಿಡಿಸೀತೋ ಹೇಳಲಾರೆ. ಅಲ್ಲೊಬ್ಬರು ಇಲ್ಲೊಬ್ಬರಿಗೆ ಒಪ್ಪಿತವಾಗಬಹುದೋ ಏನೋ!
ಷೇಕ್ಸ್‍ಪಿಯರಿನ ಕೆಲವು ಸನ್ನಿವೇಶಗಳು ತುಂಬ ವೀರ್ಯವತ್ತಾಗಿ ಮನಸ್ಸಂಕ್ಷೋಭಕಾರಕವಾಗಿರುತ್ತವೆ. ಆತನ ಸನ್ನಿವೇಶಕಲ್ಪನೆಯೇ ಅದ್ಭುತವಾಗಿರುತ್ತದೆ. ಒಂದು ಸಾಮಾನ್ಯವಾದ ಕಥೆಯನ್ನು ಪರಿವರ್ತನೆ ಮಾಡಿ ಬೆಳಸಿ ಅದಕ್ಕೊಂದರ್ಥವನ್ನು ಕಲ್ಪಿಸಿರುವುದು ಆತನ ವಿಶೇಷ ಪ್ರತಿಭೆ. ಮನುಷ್ಯ ಲೋಕದಲ್ಲಿ ಅಮಾನುಷ ಅತಿಮಾನುಷ (Miracles) ವ್ಯಕ್ತಿಗಳು ಸುಳಿದಾಡುವುದುಂಟಂತೆ. ಇದು ಷೇಕ್ಸ್‍ಪಿಯರಿನ ಮಾತು. ಅಂಥ ಸಂದರ್ಭದಲ್ಲಿ ವಿವೇಕಿಯಾದವನು ತನ್ನ ಧರ್ಮವನ್ನು ತಿಳಿದುಕೊಳ್ಳಲು ಅಂತರಾತ್ಮ ಧ್ವನಿಯನ್ನು ಆಲಿಸತಕ್ಕದ್ದೇ ಹೊರತು ಹೊರಗಣದನ್ನಲ್ಲ. ಮ್ಯಾಕ್‍ಬೆತನು ತನ್ನ ಧರ್ಮವನ್ನು ತಾನೆ ಕಂಡುಕೊಳ್ಳದೆ ಆ ಯಕ್ಷಿಣೀ ವಾಕ್ಯಗಳಿಗೆ ಪರವಶನಾಗಿ ಮರುಳಾದ. ಇದು ಕಥೆ. ಪ್ರಪಂಚದಲ್ಲಿ ನಮ್ಮ ಸ್ವಾರ್ಥವನ್ನು ಪ್ರೋತ್ಸಾಹಪಡಿಸುವ ಸಂಗತಿಗಳು ನೂರಾರಿರುತ್ತವೆ. ಧರ್ಮವನ್ನು ಕಾಣಬೇಕಾದರೆ ನಾವು ನಮ್ಮ ಒಳಗೆ ನೋಡಿಕೊಳ್ಳಬೇಕು. ಹೊರಗಿನ ಪ್ರೋತ್ಸಾಹವು ಅಹಂತೆಯನ್ನು ಕೆರಳಿಸಿ ನಮ್ಮನ್ನು ಮರುಳುಗೊಳಿಸಿ ಜೀವನವನ್ನು ಹಾಳುಮಾಡಿಯಾವು. ಧರ್ಮವಿವೇಕವು ಸ್ವತಂತ್ರವಾದದ್ದು. ಆದ್ದರಿಂದ ನಾವು ಬಾಹ್ಯ ಸಂದರ್ಭಗಳನ್ನು ಉದಾಸೀನದಿಂದ ನೋಡಬೇಕಾದದ್ದು.
ಈ ನಾಟಕದ ಕಥೆ ಈಗ್ಗೆ (೧೯೪೧) ಆರುನೂರು ವರ್ಷಗಳಷ್ಟು ಹಳೆಯದು. ಅದು ಕಟ್ಟು ಕಥೆಯಲ್ಲ; ಚರಿತ್ರೆಯ ಆಧಾರವುಳ್ಳದ್ದು. ಮಾನವ ಪ್ರಪಂಚದಲ್ಲಿಯ ಯಾವ ಒಂದು ಪದಾರ್ಥದ ಅಥವಾ ವ್ಯಾಪಾರದ ಸ್ವರೂಪವನ್ನು ಚೆನ್ನಾಗಿ ತಿಳಿಯಬೇಕಾದರೂ ಅದನ್ನು ಎರಡು ಕಡೆಗಳಿಂದ ನೋಡಬೇಕು: (೧) ಹೊರಗಿನಿಂದ, (೨) ಒಳಗಿನಿಂದ. ಭರತಖಂಡದ ಪೂರ್ವಚರಿತ್ರೆಗೆ ಸಂಬಂಧಪಟ್ಟ ಮಹಾಸಮಾರಂಭಗಳ ವಿಷಯದಲ್ಲಿ ಇಂಥ ವಿವರಗಳನ್ನು ತಿಳಿದುಕೊಳ್ಳಲು ಸಾಧನಗಳು ಸಾಲವು. ವಿದ್ಯಾರಣ್ಯರಿಗಿದ್ದ ಅಂತರ್ಭಾವಗಳೆಂಥವು, ಅವರು ತಮ್ಮ ಶಿಷ್ಯರಿಗೆ ಮಾಡಿದ ಉಪದೇಶಗಳೆಂಥವು, ಹರಿಹರ ಬುಕ್ಕರು ಮಾಡಿದ ಆಲೋಚನೆಗಳೆಂಥವು, ಆ ಕಾಲದ ಜನರಿಗಿದ್ದ ಆಶೆ ಆಶಯಗಳೆಂಥವು—ಇವುಗಳನ್ನೆಲ್ಲ ತಿಳಿಸುವ ಪ್ರತ್ಯಕ್ಷ ಪ್ರಮಾಣಗಳಾವುವೂ ಇದುವರೆಗೆ ನಮಗೆ ದೊರೆತಿಲ್ಲ. ಈ ವಿವರಗಳನ್ನು ನಾವು ಅನುಮಾನಿಸಿ, ಅಥವಾ ಊಹಿಸಿ, ಮನಸ್ಸಿಗೆ ಗೋಚರಪಡಿಸಿಕೊಳ್ಳಬೇಕಾಗಿದೆ. ಈ ಪುಸ್ತಕವನ್ನು ಬರೆದಂದಿನಿಂದ ಇದುವರೆಗೆ (೧೯೪೧) ಆಗಿರುವ 20 - 24 ವರ್ಷಗಳೊಳಗೆ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಯುಗ ಬದಲಾಯಿಸಿದೆ. ಕಾವ್ಯ ನಾಟಕಗಳ ವಸ್ತು, ಪಾಕ, ಶೈಲಿ, ಧಾಟಿ—ಇವೆಲ್ಲವೂ ಹೊಸ ಹೊಸದಾಗುತ್ತಿವೆ. ಈ ನೂತನ ಕೃತಿಗಳ ನಡುವೆ ಹಳೆಯ ತೀರಿನ “ವಿದ್ಯಾರಣ್ಯ ವಿಜಯ”ವು ಈ ಕಾಲದ ಕಾಲೇಜು ವಿದ್ಯಾರ್ಥಿನಿಯರ ನಡುವೆ ಕುಳಿತ ಹಳೆಯಕಾಲದ ಮುತ್ತೈದೆಯನ್ನು ಹೋಲುತ್ತದೆ. ಜಾರ್ಜೆಟ್‍ ಸೀರೆಯ ಹೊಳಪು ನುಣುಪುಗಳು ದೊಮ್ಮಸಂದ್ರದ ಹಳೆ ಮಗ್ಗಕ್ಕೆ ಅಪರಿಚಿತವಾದುವು. ಲೋಲಕಿನ ಥಾಳಥಳ್ಯ ಬುಗಡಿಗೆ ಬರಲಾರದು. ಮುದಿ ಮುತ್ತೈದೆಯನ್ನು ಎಂದಾದರೊಂದು ದಿನ ಕರೆದು ಸೋಬಾನೆ ಹೇಳಿಸಬೇಕೆನ್ನುವವರು ಇನ್ನೂ ಇದ್ದಾರೆಂಬುದು ಈಗ ಆಕೆಗಿರುವ ಸಮಾಧಾನ; ತನಗೆ ನಾಜೂಕೇನೂ ತಿಳಿಯದೆಂಬುದು ಆಕೆಗಿರುವ ಸಂಕೋಚ. ಎರಡೂ ಇದ್ದುಕೊಳ್ಳಲಿ. (“ಮ್ಮೂಸಿಯಮ್‍” ಎನ್ನುವ) ಪ್ರಾಚೀನ ಕಲಾ ಪ್ರದರ್ಶನ ಶಾಲೆಯಲ್ಲಂತೂ ಆಕೆಯಂಥವರಿಗೆ ಒಂದು ಜಾಗವುಂಟು.
ಕಾಲಿದಾಸಕವಿಯ ಶಾಕುಂತಲ ನಾಟಕದಲ್ಲಿಯ ಕೆಲವು ಸರಸ ಸಂದರ್ಭಗಳ ಗೀತಾನುವಾದಗಳು ಈ ಪುಸ್ತಕದಲ್ಲಿರತಕ್ಕವು. ಅಲ್ಲಿ ಸಂಸ್ಕೃತ ಪದ್ಯವೋ ವಚನವೋ ಆಗಿರುವುದು ಇಲ್ಲಿ ಕನ್ನಡ ಹಾಡಾಗಿದೆ. ಗೋವಿನ ಕಥೆಯಲ್ಲಿ ಗೊಲ್ಲಗೌಡನು ಕೊಳಲನೂದಿದನಂತೆ. ಅವನಂತೆ ಈಗಲೂ ಹಳ್ಳಿಗಾಡುಗಳಲ್ಲಿ ದನಮೇಯಿಸುವವರು ತಾವುತಾವೇ ಹಾಡಿಕೊಳ್ಳುತ್ತಾರೆ; ಕೊಳಲು ಊದುತ್ತಾರೆ. ಬೆಳಗಿನ ಜಾವದಲ್ಲಿ ಹೊಲಗದ್ದೆಗಳಿಗೆ ದನಕರು ನಡಸಿಕೊಂಡು ಹೋಗುವವರೂ ಬಂಡಿ ಹೊಡೆದುಕೊಂಡು ಹೋಗುವವರೂ ಕೊರಲ ದನಿಯಿಂದಲೋ ತುಟಿಯ ಸಿಳ್ಳಿನಿಂದಲೋ ಪಾಡಿಕೊಳ್ಳುತ್ತಾರೆ. ಇವರೇನೂ ಸ್ವರಸಾಧನೆ ಮಾಡಿದವರಲ್ಲ, ರಾಗಶುದ್ಧಿ ಬಲ್ಲವರಲ್ಲ, ಶ್ರುತಿ ತಾಳ ತಿಳಿದವರಲ್ಲ. ಅವರ ಮನಸ್ಸಿನ ಉಲ್ಲಾಸ ಅವರ ಸಂಗೀತ. ಮನುಷ್ಯಸ್ವಭಾವದ ಉಲ್ಲಾಸವು ಕಲೆಗೆ ಮೂಲದ್ರವ್ಯವಾದರೆ, ಕಲೆಯನ್ನು ಪರಿಷ್ಕಾರಪಡಿಸಿ ಮತ್ತಷ್ಟು ಸೊಗಸುಗೊಳಿಸುವ ಶಾಸ್ತ್ರವು ಮನುಷ್ಯಸ್ವಭಾವದ ಅಂತರಂಶವಾದ ಬುದ್ಧಿಯ ಪ್ರಭಾವ. ಮನುಷ್ಯನು ತನ್ನ ಕಲಾನುಭವಗಳನ್ನು ಆಗಾಗ ಪರೀಕ್ಷೆ ಮಾಡಿಕೊಳ್ಳುತ್ತ, ಸುಖಕರ ಪ್ರಯೋಗಗಳನ್ನು ಕಂಡುಕೊಳ್ಳುತ್ತ, ಮನಸ್ಸೊಪ್ಪಿದ ಲಕ್ಷಣಗಳನ್ನು ಪರೀಕ್ಷಿಸಿ ಗುರುತುಮಾಡಿಕೊಳ್ಳುತ್ತ ಹೋಗುತ್ತಾನೆ. ಹೀಗೆ ಪ್ರಕೃತಿಸಿದ್ಧವಾದ ನಾದಸಾಮಗ್ರಿಯು ಬುದ್ಧಿಕ್ರಿಯೆಯಿಂದ ಸಂಸ್ಕೃತಿಪಡೆದು ಸಂಗೀತವಾಗುತ್ತದೆ. ಆ ಸಂಸ್ಕಾರವಿಧಾನವೇ ಶಾಸ್ತ್ರ. ಶಾಸ್ತ್ರಕ್ರಿಯೆಯಿಂದ ಕಲೆಯ ಉತ್ಕೃಷ್ಟತೆ.
“ತ್ರಯೀ” ಎಂದರೆ ವೇದ. “ಪ್ರಹಸನ”—ಎಂದರೆ ನಗು, ಗಟ್ಟಿಯಾದ ನಗು, ಅಟ್ಟಹಾಸ—ಇಂಥ ನಗುವಿಗೆ ಕಾರಣವಾದ ಪ್ರಬಂಧ, ಇಂಥ ನಗುವನ್ನುಂಟುಮಾಡುವಂಥ ಪ್ರಬಂಧ. ಒಂದಾನೊಂದು ಪದಾರ್ಥವು ಅಥವಾ ಸನ್ನಿವೇಶವು ಸಾಮಾನ್ಯವಾಗಿ ರೂಢಿಯಲ್ಲಿ ಹೇಗಿರುತ್ತದೋ ಹಾಗಿರದೆ ಹೆಚ್ಚುಕಡಮೆಯಾಗಿದ್ದಾಗ ನಗುವು ಬರುತ್ತದೆ. ಅದನ್ನು ಹಾಸ್ಯವೆನ್ನುತ್ತೇವೆ. ಮೂರು ಕೃತಿಗಳು ಪ್ರಹಸನ ತ್ರಯೀ ಎಂಬ ಸಂಕಲನಗಳಲ್ಲಿ ಸೇರಿದ ಮೂರು ಪ್ರಕರಣಗಳು. ಮೊದಲನೆಯ ಜಾಕ್ ಕೇಡ್, ಷೇಕ್ಸ್ ಪೀಯರನ ಆರನೇ ಹೆನ್ರಿ ನಾಟಕದಿಂದ ಆಯ್ದ ಭಾಗ. ನಮ್ಮ ದೇಶದ ಸ್ವಾತಂತ್ರ್ಯೋತ್ತರ ದಿನಗಳಿಗೆ ಹೇಳಿ ಮಾಡಿಸಿದಂತಿರುವ ಪ್ರಸಂಗ. ‘ಮಹಾಚುನಾವಣೆ’ ಎಂಬ ಲಾವಣಿಯಾಗಲಿ, ‘ಗರ್ದಬವಿಜಯ’ ಎಂಬ ಪ್ರಸಂಗವಾಗಲಿ ನಮ್ಮ ದೇಶದ ಸಮಕಾಲೀನ ರಾಜಕೀಯ ಸಂದರ್ಭಗಳನ್ನು ಲೇವಡಿ ಮಾಡುವ ಉದ್ದೇಶದಿಂದಲೇ ರಚಿತವಾದವು.
“ತ್ರಯೀ” ಎಂದರೆ ವೇದ. “ಪ್ರಹಸನ”—ಎಂದರೆ ನಗು, ಗಟ್ಟಿಯಾದ ನಗು, ಅಟ್ಟಹಾಸ—ಇಂಥ ನಗುವಿಗೆ ಕಾರಣವಾದ ಪ್ರಬಂಧ, ಇಂಥ ನಗುವನ್ನುಂಟುಮಾಡುವಂಥ ಪ್ರಬಂಧ. ಒಂದಾನೊಂದು ಪದಾರ್ಥವು ಅಥವಾ ಸನ್ನಿವೇಶವು ಸಾಮಾನ್ಯವಾಗಿ ರೂಢಿಯಲ್ಲಿ ಹೇಗಿರುತ್ತದೋ ಹಾಗಿರದೆ ಹೆಚ್ಚುಕಡಮೆಯಾಗಿದ್ದಾಗ ನಗುವು ಬರುತ್ತದೆ. ಅದನ್ನು ಹಾಸ್ಯವೆನ್ನುತ್ತೇವೆ. ಮೂರು ಕೃತಿಗಳು ಪ್ರಹಸನ ತ್ರಯೀ ಎಂಬ ಸಂಕಲನಗಳಲ್ಲಿ ಸೇರಿದ ಮೂರು ಪ್ರಕರಣಗಳು. ಮೊದಲನೆಯ ಜಾಕ್ ಕೇಡ್, ಷೇಕ್ಸ್ ಪೀಯರನ ಆರನೇ ಹೆನ್ರಿ ನಾಟಕದಿಂದ ಆಯ್ದ ಭಾಗ. ನಮ್ಮ ದೇಶದ ಸ್ವಾತಂತ್ರ್ಯೋತ್ತರ ದಿನಗಳಿಗೆ ಹೇಳಿ ಮಾಡಿಸಿದಂತಿರುವ ಪ್ರಸಂಗ. ‘ಮಹಾಚುನಾವಣೆ’ ಎಂಬ ಲಾವಣಿಯಾಗಲಿ, ‘ಗರ್ದಬವಿಜಯ’ ಎಂಬ ಪ್ರಸಂಗವಾಗಲಿ ನಮ್ಮ ದೇಶದ ಸಮಕಾಲೀನ ರಾಜಕೀಯ ಸಂದರ್ಭಗಳನ್ನು ಲೇವಡಿ ಮಾಡುವ ಉದ್ದೇಶದಿಂದಲೇ ರಚಿತವಾದವು.
“ತ್ರಯೀ” ಎಂದರೆ ವೇದ. “ಪ್ರಹಸನ”—ಎಂದರೆ ನಗು, ಗಟ್ಟಿಯಾದ ನಗು, ಅಟ್ಟಹಾಸ—ಇಂಥ ನಗುವಿಗೆ ಕಾರಣವಾದ ಪ್ರಬಂಧ, ಇಂಥ ನಗುವನ್ನುಂಟುಮಾಡುವಂಥ ಪ್ರಬಂಧ. ಒಂದಾನೊಂದು ಪದಾರ್ಥವು ಅಥವಾ ಸನ್ನಿವೇಶವು ಸಾಮಾನ್ಯವಾಗಿ ರೂಢಿಯಲ್ಲಿ ಹೇಗಿರುತ್ತದೋ ಹಾಗಿರದೆ ಹೆಚ್ಚುಕಡಮೆಯಾಗಿದ್ದಾಗ ನಗುವು ಬರುತ್ತದೆ. ಅದನ್ನು ಹಾಸ್ಯವೆನ್ನುತ್ತೇವೆ. ಮೂರು ಕೃತಿಗಳು ಪ್ರಹಸನ ತ್ರಯೀ ಎಂಬ ಸಂಕಲನಗಳಲ್ಲಿ ಸೇರಿದ ಮೂರು ಪ್ರಕರಣಗಳು. ಮೊದಲನೆಯ ಜಾಕ್ ಕೇಡ್, ಷೇಕ್ಸ್ ಪೀಯರನ ಆರನೇ ಹೆನ್ರಿ ನಾಟಕದಿಂದ ಆಯ್ದ ಭಾಗ. ನಮ್ಮ ದೇಶದ ಸ್ವಾತಂತ್ರ್ಯೋತ್ತರ ದಿನಗಳಿಗೆ ಹೇಳಿ ಮಾಡಿಸಿದಂತಿರುವ ಪ್ರಸಂಗ. ‘ಮಹಾಚುನಾವಣೆ’ ಎಂಬ ಲಾವಣಿಯಾಗಲಿ, ‘ಗರ್ದಬವಿಜಯ’ ಎಂಬ ಪ್ರಸಂಗವಾಗಲಿ ನಮ್ಮ ದೇಶದ ಸಮಕಾಲೀನ ರಾಜಕೀಯ ಸಂದರ್ಭಗಳನ್ನು ಲೇವಡಿ ಮಾಡುವ ಉದ್ದೇಶದಿಂದಲೇ ರಚಿತವಾದವು.
‘ದಿವಾನ್ ರಂಗಾಚಾರ್ಲು’ ತಕ್ಕಷ್ಟು ವಿಸ್ತಾರವಾಗಿ, ಹಳೆಯ ಮೈಸೂರು ರಾಜ್ಯವನ್ನು ಆಳಿದ ಹಿರಿಯರೊಬ್ಬರನ್ನು ಪರಿಚಯಿಸುತ್ತದೆ. ಅವರ ಬದುಕಿನ ಕೆಲವಾರು ಘಟನೆಗಳು ಇದರಲ್ಲಿ ನಿರೂಪಿತವಾಗಿವೆ. ೧೯೧೧ರಷ್ಟು ಹಿಂದೆಯೇ, ಕನ್ನಡದಲ್ಲಿ ಜೀವನಚರಿತ್ರೆಗಳೇ ಇಲ್ಲವೆನ್ನುವಂಥ ಕಾಲದಲ್ಲಿ ಡಿ.ವಿ.ಜಿ. ಇದನ್ನು ಬರೆದು ಉಪಕಾರ ಮಾಡಿದ್ದಾರೆ. ಇದರಲ್ಲಿ ರಂಗಚಾರ್ಲು ಜೀವನದ ಎಲ್ಲ ಪ್ರಸಂಗಗಳನ್ನು ಕೂಲಂಕುಷವಾಗಿ ವಿವರಿಸದಿದ್ದರೂ, ಒಟ್ಟಿನಲ್ಲಿ ದಿವಾನರ ಪರಿಚಯ ಆಗುತ್ತದೆ. ರಂಗಾಚಾರ್ಲು ಅವರ ಬದುಕಿನಲ್ಲಿ ವಿಶೇಷವಾಗಿ ಕಂಡುಬರುವ, ಸಂಸ್ಥಾನದ ಅಭಿವೃದ್ಧಿಯ ಆಕಾಂಕ್ಷೆ, ಪ್ರಜೆಗಳನ್ನು ಕುರಿತ ಚಿಂತನೆ, ಚಿಂತನೆಯನ್ನು ಅನುಷ್ಟಾನಗೊಳಿಸುವುದರಲ್ಲಿನ ಆಸಕ್ತಿ ಇವನ್ನು ಕಾಣಬಹುದು. ಇದೊಂದು ವಾಸ್ತವಿಕ ಚಿತ್ರಣ.
ಈ ಪ್ರಬಂಧದ ಬಹುಭಾಗ ಮೊದಲು ಪ್ರಕಟವಾದದ್ದು ೧೯೨೩ರ ಜೂನ್‍-ಡಿಸೆಂಬರುಗಳಲ್ಲಿ, -ಆಗ ನಾನು ನಡೆಸುತ್ತಿದ್ದ “ಕರ್ಣಾಟಕ ಜನಜೀವನ ಮತ್ತು ಅರ್ಥ ಸಾಧಕ ಪತ್ರಿಕೆ” ಎಂಬ ಮಾಸ ಪತ್ರಿಕೆಯಲ್ಲಿ. ಅದನ್ನು ಬರೆದದ್ದು ಅಂದಿಗೆ ಒಂದೆರಡು ವರ್ಷ ಹಿಂದೆ. ಹೀಗೆ ಸಮಾರು ಮುವ್ವತ್ತೆರಡು ವರ್ಷಗಳಷ್ಟು ಹಳೆಯದು ಈ ಪ್ರಬಂಧ. ಈ ಮಾತು ಇಲ್ಲಿಯ ಮೊದಲನೆಯ ಹನ್ನೆರಡು ಪ್ರಕರಣಗಳಿಗೆ ಅನ್ವಯಿಸುತ್ತವೆ. ಕಡೆಯ ಮೂರು ಪ್ರಕರಣಗಳು ಹೊಸವು. ಆ ಗ್ರಂಥವನ್ನು ಬರೆದ ಕಾಲದಲ್ಲಿ ಈ ಪ್ರಬಂಧ ನನ್ನೆದುರಿಗಿರಲಿಲ್ಲ. ಇದಕ್ಕಾಗಿ ಹುಡುಕಾಡಲು ನನಗೆ ಆಗ ವಿರಾಮ ದೊರೆಯಲಿಲ್ಲ. ಈಚೆಗೆ ಶ್ರೀ ಚಿದಂಬರಂ ಅವರ ಒಂದು ಉದ್ದೇಶಕ್ಕಾಗಿ ನಾನು ಯಾವುದೋ ಹಳೆಯ ಕಾಗದಗಳನ್ನು ಹುಡುಕುತ್ತಿದ್ದಾಗ ಇದು ಅಕಸ್ಮಾತ್ತಾಗಿ ಕಣ್ಣಿಗೆ ಬಿತ್ತು. ನೋಡಿದ್ದರಲ್ಲಿ ಈ ಪ್ರಬಂಧವು ಆ ‘ರಾಜ್ಯಶಾಸ್ತ್ರ’ ಗ್ರಂಥದಲ್ಲಿ ತಕ್ಕಷ್ಟು ವಿಸ್ತರಿಸಲಾಗದಿದ್ದ ಕೆಲವು ಮುಖ್ಯಾಂಶಗಳನ್ನು ವಿಸ್ತಾರಪಡಿಸಿದೆಯೆಂದೂ, ಅಲ್ಲಿಯ ಕೆಲವು ಸಾರ ವಿಚಾರಗಳಿಗೆ ಪೀಠಿಕಾಪ್ರಾಯವಾಗಿದೆಯೆಂದೂ ತೋರಿತು. ಈ ಎರಡು ಪುಸ್ತಕಗಳಿಗೂ ಒಂದೆರಡು ಭಾಗಗಳಲ್ಲಿ ವಿಷಯ ಒಂದೇ ಎಂಬಂತೆ ಸ್ಥೂಲವಾಗಿ ಕಂಡರೂ ಜಿಜ್ಞಾಸಿತಗಳಾಗಿರುವ ತತ್ತ್ವಗಳು ಸ್ವಭಾವದಲ್ಲಿ ಸೂಕ್ಷ್ಮವಾದವೂ ಹಾಗೆಯೇ ನಮಗೆ ಬಹಳ ಮುಖ್ಯವಾದವೂ ಆಗಿರುವ ಕಾರಣ ಇಲ್ಲಿಯ ಪುನರ್ವಿಚಿಂತನೆಯು ಅಯುಕ್ತವಾಗದು, ಉಪಯುಕ್ತವಾಗಬಹುದು.
ವಾರ್ತಾಪತ್ರಿಕೋದ್ಯೋಗ ನನ್ನ ಜೀವನ. ಅಂಥವನ ಕೈಗೆ ದೊರೆಯುವ ವಿಚಾರಗಳು ಆಯಾ ಕ್ಷಣಕ್ಕೆ ಮಾತ್ರ ಮುಖ್ಯವೆನಿಸಿದವು. ಅಂಥ ಕ್ಷಣಿಕ ಪ್ರಶ್ನೆಗಳು ಆಲೋಚನೆಗೆ ಬಂದಾಗ ಅವು ಸ್ಥಾಯೀ ತತ್ತ್ವಗಳನ್ನು ರಂಗಕ್ಕೆಳೆದುಕೊಳ್ಳುವುದುಂಟು. ತತ್ತ್ವದ ಸ್ವರೂಪ ನಮಗೆ ಮನದಟ್ಟುವುದು ಅಂಥಾ ಪ್ರಯೋಗ ಸಂದರ್ಭದಲ್ಲಿ. ಈ ಕಾರಣದಿಂದ, ಒಂದು ದಿನದ ಮಟ್ಟಿಗೆ, ಒಂದು ವಾರದ ಮಟ್ಟಿಗೆ ಬಾಳಿಹೋಗುವ ವಾರ್ತಾ ಪ್ರತ್ರಿಕೆಯ ಲೇಖನಕ್ಕೂ ಒಂದೊಂದು ಸಾರಿ ಬಹುಕಾಲದ ಬೆಲೆ ಬರುವುದುಂಟು. ತತ್ತ್ವಕ್ಕೆ ಅಲ್ಲಿ ನಿದರ್ಶನವಿರುತ್ತದೆ. ಇಂಥ ನಂಬಿಕೆಯಿಂದ ಆಗಿರುವುದು ಈ ಸಂಕಲನ. ಇದು ಶಾಸ್ತ್ರಗ್ರಂಥವಲ್ಲ. ಆದದ್ದರಿಂದ ವಿಷಯ ಪ್ರತಿಪಾದನೆಯಲ್ಲಿ ಒಂದು ಆದ್ಯಂತ ಕ್ರಮವಾಗಲಿ ಸಮಗ್ರತೆಯಾಗಲಿ ಇಲ್ಲಿ ಕಾಣಬಾರದು. ವಾಕ್ಯಶೈಲಿಯಲ್ಲಿಯೂ ಇದು ಶಾಸ್ತ್ರದ ಬಿಗಿತಕ್ಕಿಂತ ಜನ ಸುಲಭವಾದ ಲಘುತೆಯನ್ನು ಉದ್ದೇಶಿಸಿಕೊಂಡಿದೆ. ಪಾರಿಭಾಷಿಕ ಪದಗಳ ಅರ್ಥವನ್ನು ವಿಶದಪಡಿಸುವುದಕ್ಕೋಸ್ಕರವೂ ಬೇಸರಕಳೆಯುವುದಕ್ಕೋಸ್ಕರವೂ ಇಲ್ಲಿ ಒಂದೇ ಶಾಸ್ತ್ರೀಯ ಶಬ್ದಕ್ಕೆ ಎರಡು ಮೂರು ಪರ್ಯಾಯ ಪದಗಳನ್ನು ಬಳಸಿಕೊಂಡಿದೆ: ಉದಾಹರಣೆಗಾಗಿ “ವೋಟ್‍” (Vote) ಎಂಬ ಇಂಗ್ಲಿಷ್‍ ಮಾತಿಗೆ “ಮತಾಂಕ”, “ಇಷ್ಟಮುದ್ರೆ” ಎಂದು ಮೊದಲಾದ ಎರಡು ಮೂರು ಸಮಾನ ಪದಗಳನ್ನು ಉಪಯೋಗಿಸಿದೆ. ನಮ್ಮ ಭಾಷೆಯಲ್ಲಿ ವಾಕ್ಸೌಕರ್ಯ ಹೆಚ್ಚಬೇಕಾದರೆ ಜನಕ್ಕೆ ಹೀಗೆ ನೂತನ ಪದ ಪರಿಚಯ ಆಗತ್ತಿರಬೇಕು. ಈ ಮೇಲೆ ಹೇಳಿರುವ ಮಾತುಗಳು ಇದೇ ಪ್ರಸಂಗ ಸರಣಿಯಲ್ಲಿ ಇನ್ನು ಮುಂದೆ ಪ್ರಕಟವಾಗುವ ಲೇಖನಗಳಿಗೂ ಅನ್ವಯಿಸುತ್ತವೆ. ಈ ಎಲ್ಲ ಲೇಖನಗಳೂ ಇಲ್ಲಿಯ ಲೇಖಕನ “ರಾಜ್ಯಶಾಸ್ತ್ರ” ಎಂಬ ಗ್ರಂಥಕ್ಕೆ ಅನುಬಂಧಗಳಂತೆ, ಅಥವಾ ಪರಿಶಿಷ್ಟ ಭಾಗಗಳಂತೆ ಇರುತ್ತದೆ. ರಾಜ್ಯ ವ್ಯವಸ್ಥೆಯಲ್ಲಿಯೂ ಜನತಾಭ್ಯುದಯದಲ್ಲಿಯೂ ಕುತೂಹಲವುಳ್ಳ ಮಹಾಶಯರು ಆ ಗ್ರಂಥವನ್ನೂ “ರಾಜ್ಯಾಂಗತತ್ತ್ವಗಳು” ಎಂಬ ಗ್ರಂಥವನ್ನೂ ಇದರೊಡನೆ ನೋಡಿದಲ್ಲಿ ಹೆಚ್ಚು ಪ್ರಯೋಜನವಾಗಬಹುದೆಂದು ತಲೆಬಾಗಿ ಬಿನ್ನಯಿಸುತ್ತೇನೆ.
ಇಂದಿನ ಹೊಸ ರಾಜಕೀಯಕ್ಕೂ ನಮ್ಮ ಹಳೆಯ ದೇಶಕ್ಕೂ ಹೊಂದಿಕೆ ಇನ್ನೂ ಚೆನ್ನಾಗಿ ಆಗಿಲ್ಲ. ಈಗ ನಮ್ಮ ಜನಕ್ಕೆ ಎಷ್ಟು ಹೇಳಿದ್ದರೂ ಇನ್ನೂ ಮತ್ತೆ ಮತ್ತೆ ಹೇಳ ಬೇಕಾದದ್ದೆನ್ನಿಸುವಂಥ ಮಾತು ಒಂದಿದೆ: “ನಿಮ್ಮ ಸರಕಾರವು ನಿಮ್ಮ ವಿಚಕ್ಷಣೆಗೆ ತಕ್ಕಂತೆ ಇದೆ. ನಿಮ್ಮ ನೀತಿ ನಿಷ್ಠೆಯೂ ವಿವೇಕವೂ ನಡಸಿದಂತೆ ನಿಮ್ಮ ರಾಜ್ಯ ನಡೆಯುತ್ತಿದೆ. ನಿಮ್ಮ ಮಂತ್ರಿಗಳನ್ನು ನೋಡುವುದಕ್ಕೆ ಮೊದಲು ನಿಮ್ಮನ್ನು ನೀವು ನೋಡಿಕೊಳ್ಳಿ.” ಇದರಲ್ಲಡಗಿದೆ ಪ್ರಜಾಪ್ರಭುತ್ವದ ಮೂಲತತ್ತ್ವ: ಪ್ರಜೆಯಂತೆ ರಾಜ್ಯ: ಇದೇ ಈ ಪುಸ್ತಕದಲ್ಲಿಯ ನಾನಾ ಪ್ರಸಂಗಗಳ ಪಲ್ಲವಿ. ಪ್ರಜಾತಂತ್ರದ ಸ್ವರೂಪಸ್ವಭಾವಗಳನ್ನು ತಾತ್ತ್ವಿಕ ದೃಷ್ಟಿಯಿಂದ ಪ್ರಕೃತ ಲೇಖಕನ ‘ರಾಜ್ಯಶಾಸ್ತ್ರ’ ಗ್ರಂತದಲ್ಲಿ ತಕ್ಕಮಟ್ಟಿಗೆ ವಿವರಿಸಿದ್ದಾಗಿದೆ. ಅಲ್ಲಿ ಕೇವಲ ತತ್ತ್ವವಾಗಿ ಹೇಳಿದ್ದನ್ನು ಪ್ರಯೋಗ ನಿದರ್ಶನದ ಮೂಲಕ ವಿಶದಪಡಿಸುವುದು ಈ ಪ್ರಸಂಗ ಸಂಗ್ರಹದ ಉದ್ದೇಶ.
ಈ ಲೇಖನಗಳು ಆಯಾ ವ್ಯಕ್ತಿಯ ಜೀವನಚರಿತ್ರೆಯಲ್ಲ; ಯೋಗ್ಯತಾ ನಿರ್ಣಯವೂ ಅಲ್ಲ. ಆಯಾ ವ್ಯಕ್ತಿಯ ವಿಷಯದಲ್ಲಿ ನನ್ನ ಮನಸ್ಸು ಗ್ರಹಿಸಲಾದಷ್ಟನ್ನು, ಅದರಲ್ಲಿ ನನ್ನ ನೆನೆಪು ಉಳಿಸಿಕೊಟ್ಟಷ್ಟನನ್ನು, ಲಿಖಿತ ಮಾಡುವುದಷ್ಟೇ ನನ್ನ ಪ್ರಯತ್ನ. ನನಗೆ ತೋರಿದ್ದೇ ಪೂರ್ಣವಲ್ಲ ; ನನ್ನ ಅಭಿಪ್ರಾಯವೇ ತೀರ್ಮಾನವಲ್ಲ. ಬೇರೆ ಅನುಭವಗಳೂ ಬೇರೆ ಅಭಿಪ್ರಾಯಗಳೂ ನಾಲ್ಕಾರಿದ್ದಾವು, ಸಾಧ್ಯವಿರುವ ಹತ್ತು ದೃಷ್ಟಿಗಳಲ್ಲಿ ನನ್ನ ದೃಷ್ಟಿಯೂ ಒಂದು. ನಮ್ಮ ದೇಶದಲ್ಲಿ ಸಾರ್ವಜನಿಕ ವಿಚಾರಗಳಲ್ಲಿ ನಡೆಯುತ್ತಿರುವ ಪ್ರಮಾದಗಳಿಗೆ ಚರಿತ್ರೆಯ ಅಪರಿಚಯವೇ ಮುಖ್ಯ ಕಾರವವೆಂದು ಹೇಳಬಹುದು. ಚರಿತ್ರೆಯೆಂದರೆ ಒಂದು ಪ್ರಶ್ನೆಯ ಹಿನ್ನೆಲೆ. ಆ ಪ್ರಶ್ನೆ ಹೇಗೆ ಹುಟ್ಟಿತು. ಹಿಂದಿನವರು ಆ ಪ್ರಶ್ನೆಯನ್ನು ಹೇಗೆ ಎದುರಿಸಿದರು, ಅವರ ನಡವಳಿಕೆಯಲ್ಲಿ ಇದ್ದ ಮನೋಗತವೇನು, ಆ ನಡವಳಿಕೆ ವ್ಯರ್ಥವಾದದ್ದಕ್ಕೆ ಕಾರಣಗಳೇನು - ಇಂಥ ಅನುಭವ ಪರೀಕ್ಷೆಯೇ ಚರಿತ್ರೆ. ಚರಿತ್ರೆಯನ್ನು ಒಳಹೊಕ್ಕು ವಿಮರ್ಶಿಸಿದರೆ ಹಿಂದೆ ಮಾಡಿದ ತಪ್ಪೇನು ಎಂದು ನಮಗೆ ಎಚ್ಚರಿಕೆ ದೊರೆಯುತ್ತದೆ. ಈಗ ನಾವು ಅಂಥ ತಪ್ಪನ್ನು ಮಾಡದಿರಲು ಯಾವ ಎಚ್ಚರಿಕೆ ಅವಶ್ಯ, ನಾವು ಯಾವ ಹೊಸ ನೀತಿಯನ್ನು ಅವಲಂಬಿಸಿದರೆ ಹಳೆಯ ಅಪಾಯ ನಮಗೆ ತಪ್ಪೀತು ? - ಈ ವಿಧವಾದ ಜಾಗ್ರತೆ ಮತ್ತು ಬೋಧನೆ ನಮಗೆ ಚರಿತ್ರೆಯ ವಿಮರ್ಶನೆಯಿಂದ ಆಗಬಹುದಾದ ಉಪಕಾರ.
ಗಾಯನನಿಪುಣರೂ ನಾಟ್ಯನಿಪುಣರೂ ಬೆಲೆಕೊಡಬಹುದಾದ ಸಂಗತಿ ಈ ಪುಸ್ತಕದಲ್ಲೇನೂ ಇರಲಾರದು. ಶಾಸ್ತ್ರಜ್ಞಾನವಿಲ್ಲದೆ, ಅಭ್ಯಾಸಬಲವಿಲ್ಲದೆ, ಬರಿಯ ಖುಷಿಗಾಗಿ ಸಂಗೀತ ಕೇಳಿ ನಾಟ್ಯ ನೋಡಿದ ಒಬ್ಬ ಸಾಮಾನ್ಯ ಮನುಷ್ಯನು ತನ್ನಂಥ ಸಾಮಾನ್ಯರಿಗಾಗಿ ತನ್ನ ಅನುಭವಗಳನ್ನು ಗುರುತುಹಾಕಿಟ್ಟ ಪುಸ್ತಕ ಇದು. ನಾನು ಹುಟ್ಟಿ ಬೆಳೆದ ಮನೆಯ ನೆರೆಹೊರೆಯಲ್ಲಿ ಗಾಯಕರ ಮತ್ತು ನರ್ತಕರ ಮನೆಗಳಿದ್ದವು. ಅಂಥ ಸಹವಾಸ ಚಿಕ್ಕಂದಿನಿಂದ ನನಗೆ ದೊರೆತಿದ್ದದ್ದರಿಂದ ಕೊಂಚ ಕಲಾಭಿರುಚಿಯುಂಟಾಗಿರಬಹುದು. ಆಮೇಲೆ ಅದು ಬೆಳೆಯಲು ಅವಕಾಶ ದೊರೆಯಿತು. ನನ್ನ ತೀರ್ಥರೂಪ ಮಾವಂದಿರಾದ ದಿವಂಗತ ಬಿ. ಎಸ್. ರಾಮಯ್ಯನವರು ಸಂಗೀತಪ್ರೇಮಿಗಳು. ಸಂಗೀತಗಾರನ ಜಾರುಗಳೂ ಕೊಂಕುಗಳೂ ಹೇಗೋ ಕಲಾಕರ್ತನ ಮರ್ಮಗಳೂ ಸ್ವಾರಸ್ಯಗಳೂ ಹಾಗೆಯೇ ಲೇಖನಾತೀತಾಗಳು-ಹಾಗೆ ಅನುಭವದಿಂದಲೇ ತಿಳಿಯಲಾಗತಕ್ಕವು. ಆ ಅನುಭವವು ನೀರಿನ ಆವಿಯಂತೆ; ಗೊತ್ತಾದ ಮೈಕಟ್ಟಲ್ಲದವು. ಕಲಾಜೀವಿಯ ಸಿದ್ಧಿಯೇ ಹೀಗೆ ಅವಿಲೇಖ್ಯವೆಂದಮೇಲೆ, ಅವನ ಜೀವಿತಚರಿತ್ರೆಯೆಂಬುದೆಂಥದು? ಕವಿ, ಶಾಸ್ತ್ರವಿದ್ವಾಂಸ, ಗಾಯಕ, ನರ್ತಕಿ-ಇಂಥವರ ಜೀವನ ಅಂತರಂಗದ್ದು, ಬಹಿರಂಗದ್ದಲ್ಲ. ರಾಜಕೀಯಸ್ಥನ ಜೀವನವೂ ವ್ಯಾಪಾರಿಯ ಜೀವನವೂ ಬಹಿರಂಗದ್ದು. ಅವರಿಗೆ ಗಿರಾಕಿ ಬೇಕು. ಆದದ್ದರಿಂದ ಅವರು ಹೊರಗಣ ಜನದೊಡನೆ ಹೆಣಗಾಡಬೇಕು: ಹಾರಬೇಕು, ಹೀಗೆ ಪ್ರಪಂಚವನ್ನು ತಮ್ಮೆಡೆಗೆ ಸೆಳೆದುಕೊಳ್ಳಬೇಕು. ಈ ಕಾರ್ಯಾವಸರದಲ್ಲಿ ಅವರು ಮಾಡುವ ಸಾಹಸಗಳೂ ಉಪಾಯಗಳೂ ಅನುಸಂಧಾನಗಳೂ ವರ್ಣನೆಗೆ ವಿಷಯಗಳಾಗುತ್ತವೆ. ರಾಜಕೀಯಸ್ಥನ ಭಾಷಣಘೋಷಣಗಳು ಗ್ರಂಥವಸ್ತುವಾಗುತ್ತವೆ. ಗಾಯಕನ ಗಾನವಿಲಾಸಗಳನ್ನು ಹಾಗೆ ಬರೆದು ಅಚ್ಚಿಡಲಾದೀತೆ? ಕಲೋಪಾಸಿಯೂ ಶಾಸ್ತ್ರ ಪಾಠಕನೂ ಬದುಕುವುದು ಅವರವರ ಒಳಗೆ-ಅವರವರ ಮನಸ್ಸು ಬುದ್ಧಿಗಳ ಒಳಗಡೆ. ಹೊರಗಡೆಗೆ ಅವರು ಎಲ್ಲ ಮನುಷ್ಯರಂತೆ ಇರುತ್ತಾರೆ-ಸಾಮಾನ್ಯವಾಗಿ. ದೇಹಪ್ರವೃತ್ತಿಗಳಲ್ಲಿ ಕಲೆಗಾರನ ವಿಶೇಷವೇನೂ ಇಲ್ಲ, ಅಲ್ಲಿ ಅವನೂ ಪ್ರಕೃತಿಗೊಳಪಟ್ಟವನೇ; ಅವನ ವಿಶೇಷವೇನಿದ್ದರೂ ಅಂತರಂಗದಲ್ಲಿ. ಆದದ್ದರಿಂದ ಕವಿ ಗಾಯಕ ನರ್ತಕ ಶಿಲ್ಪಿ ಚಿತ್ರಕಾರರನ್ನು ಕುರಿತ ಜೀವಿತಚರಿತ್ರೆಗಳು ಬಹುಮಟ್ಟಿಗೆ ಔಪಚಾರಿಕ ಕೃತಿಗಳಾಗಿರುತ್ತವೆ; ವಾಸ್ತವಿಕವಲ್ಲ. ಅವು ರಾಜಕೀಯಸ್ಥನ ಜೀವಿತಚರಿತ್ರೆಗೆ ಸಮನಾಗಿ ವಿಸ್ತರಿಸಲಾರವು. ಗಾಯಕನ ಜೀವಿತಚರಿತ್ರೆ ನಾಮಮಾತ್ರಕ್ಕೆ ಜೀವಿತಚರಿತ್ರೆ.
ಈ ಕವನಸಂಗ್ರಹಕ್ಕೆ “ವಸಂತ ಕುಸುಮಾಂಜಲಿ” ಎಂದು ಹೆಸರು ಕೊಟ್ಟವರು ಶ್ರೀ ಟಿ. ಎಸ್. ವೆಂಕಣ್ಣಯ್ಯನವರು. ವಿಷಯದಲ್ಲಿಯೂ ಶೈಲಿಯಲ್ಲಿಯೂ ಈ ಕವನಗಳು ಕನ್ನಡಪ್ರಪಂಚಕ್ಕೆ ಆಗ ಬರಲಿದ್ದಂತೆ ತೋರಿದ ಹೊಸ ವಸಂತಕಾಲದ ಮೊದಲ ಗುರುತಿನ ಮೊಗ್ಗುಗಳಂಥವು - ಎಂಬುದು ಅವರ ಭಾವನೆ. ಅದು ಸ್ನೇಹಾಭಿಮಾನದ ಕಲ್ಪನೆ ಎಂದು ನನ್ನ ಮನಸ್ಸಿಗೆ ಆಗಲೂ ತೋರಿತ್ತು. ಅಂದಿನಿಂದ ಇದುವರೆಗಿನ ಸುಮಾರು ೩೦ ವರ್ಷಗಳಲ್ಲಿ ಕನ್ನಡ ಹೊಸತನವನ್ನು ಸಂಪಾದಿಸಿಕೊಂಡಿರುವುದು. ಈಗ ಚೆನ್ನಾಗಿ ಕಾಣುತ್ತಿದೆ. ಗ್ರಂಥದ ವಿಷಯ, ಶಬ್ದಸಾಮಗ್ರಿ, ವಾಕ್ಯರಚನೆಯ ರೀತಿ, ಪ್ರತಿಪಾದನಕ್ರಮ - ಇವೆಲ್ಲ ಹೊಸದಾಗುತ್ತಿವೆ. ಭಾಷೆಗೆ ಬಂದಿದ್ದ ಪೆಡಸುತನ, - ಅದರ ಎರಕದಚ್ಚಿನ ಸರಿತನ, - ಅದರ ಮರಮುಟ್ಟಿನ ಒಣ ಅಚ್ಚು ಕಟ್ಟು - ಈಗ ಸಡಿಲವಾಗಿ, ಅದಕ್ಕೆ ಜೀವಂತಾಂಗದ ಮೃದುತೆ ನಯನಮ್ಯತೆಗಳು ಬರುತ್ತಿವೆ. ಇಂಗ್ಲಿಷ್ ಮೊದಲಾದ ಇತರ ವ್ಯಾವಹಾರಿಕ ಭಾಷೆಗಳ ಧೋರಣೆಯ ಅನುಕರಣೆ ಕನ್ನಡ ಸಾಹಿತ್ಯದಲ್ಲಿ ಆಗುತ್ತಿದೆ. ಹೀಗೆ ಶ್ರೀಮಾನ್ ವೆಂಕಣ್ಣಯ್ಯನವರ ಭವಿಷ್ಯದ್ದೃಷ್ಟಿ ಈಗ ಫಲಕ್ಕೆ ಬರುತ್ತಿದೆಯೆಂದು ಹೇಳಬಹುದುಗಿದೆ. (ಅದು ಈ ಕೃತಿಗಳ ಪ್ರಭಾವವೆಂದು ಲೇಖಕನು ಎಷ್ಟುಮಾತ್ರವೂ ಎಣಿಸಿಕೊಂಡಿಲ್ಲವೆಂಬುದನ್ನು ಹೇಳಬೇಕಾದದ್ದಿಲ್ಲವಷ್ಟೆ?) ಈ ನವೋದಯಕ್ಕೆ ಕಾರಣ ಕಾಲಗರ್ಭದಲ್ಲಿ ಅಡಗಿ ಕೊಂಡಿರುವ ಮಾನವಪ್ರಗತಿ ಬೀಜ. ಆಗಿಂದಾಗಿಗೆ ಹೊಸಹೊಸದಾಗುತ್ತಿರುವುದು ಪ್ರಪಂಚದ ಎಲ್ಲ ಜೈವವಸ್ತುಗಳಿಗೂ ಸ್ವಭಾವಸಿದ್ಧವಾಗಿರುವ ಲಕ್ಷಣ. ಅದು ಭಾಷೆಸಾಹಿತ್ಯಗಳಿಗೂ ಉಂಟು. ಪ್ರಕೃತ, ಈ ಮುದ್ರಣದಲ್ಲಿ ಕೆಲವುಕಡೆ ಕೊಂಚ ಕೊಂಚ ತಿದ್ದುಪಡಿಗಳಾಗಿರುವುದಲ್ಲದೆ ಮೂರು ತುಣುಕುಗಳು ಹೊಸದಾಗಿ ಸೇರಿವೆ. ಇವುಗಳಲ್ಲಿ ಒಂದು ಬಹುಶಃ ಇಪ್ಪತ್ತೈದು ವರ್ಷಗಳಷ್ಟು ಹಳೆಯದು.
“ನಿವೇದನ” ಪುಸ್ತಕವು ಮೊದಲ ಸಾರಿ ಪ್ರಕಟವಾದದ್ದು ೧೯೨೪ನೆಯ ಇಸ್ವಿ ಏಪ್ರಿಲ್‍ ತಿಂಗಳಲ್ಲಿ, ಬೆಂಗಳೂರು ಸೆಂಟ್ರಲ್‍ ಕಾಲೇಜಿನ ಕರ್ಣಾಟಕ ಸಂಘದ ಆಶ್ರಯದಲ್ಲಿ. “ತನ್ನ ದೇಶದಲ್ಲಿ ಪ್ರಕೃತಿ ನಿರ್ಮಿತಗಳಾಗಿಯೂ ಮನುಷ್ಯ ನಿರ್ಮಿತಗಳಾಗಿಯೂ ಖ್ಯಾತಿಗೊಂಡಿರುವ ದೃಶ್ಯ ವಿಶೇಷಗಳನ್ನು ಲೇಖಕನು ಮೊಟ್ಟ ಮೊದಲು ನೋಡಿದಾಗ ತನಗಾದ ಅನುಭವವು ಮರಳಿ ಆಗಾಗ ತನ್ನ ನೆನಪಿಗೆ ದೊರೆಯಲಾಗುವಂತೆ ಅದನ್ನು ಮಾತುಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕೆಂದು ಮಾಡಿದ ಪ್ರಯತ್ನದ ಫಲವೇ ಈ ಪುಸ್ತಕದ ಪದ್ಯಗಳು”. … “ಬೇಲೂರಿನ ವಿಗ್ರಹಗಳು ಕೀಟ್ಸ್‍ (Keats) ಎಂಬ ಇಂಗ್ಲಿಷ್‍ ಕವಿಯ Ode on a Grecian Urn ಎಂಬ ಕಾವ್ಯದಲ್ಲಿಯ ಸೌಂದರ್ಯ ಪ್ರಶಂಸೆಯನ್ನು ಜ್ಞಾಪಕಕ್ಕೆ ತಂದವು. ಇಲ್ಲಿಯ ಒಂದೆರಡು ಪಂಕ್ತಿಗಳು ಆ ಮಹಾಕವಿಯ ಪ್ರಸಾದವಾಗಿವೆ”. ಈ ಪುಸ್ತಕಕ್ಕೆ ಇಂದಿನ ಪುನರ್ಮುದ್ರಣಯೋಗ ಬಂದಿರುವುದು ಬಹುಮಟ್ಟಿಗೆ ಮೈಸೂರು ವಿಶ್ವವಿದ್ಯಾಲಯದ ಕೃಪೆಯಿಂದ. ಆ ವಿದ್ಯಾಪೀಠದ ಅಧಿಕಾರಿಗಳು ಇದನ್ನು ೧೯೫೮ರ ಇಂಟರ್‍ಈಡಿಯೆಟ್‍ ಪರೀಕ್ಷೆಗೆ ಪಠ್ಯಗ್ರಂಥವನ್ನಾಗಿರಿಸಿದ್ದಾರೆ. ಈ ಉಪಕಾರಕ್ಕಾಗಿ ಅವರಿಗೆ ಲೇಖಕನ ಹೃದಯದಿಂದ ವಂದನೆ.
ನನ್ನ ಹುಟ್ಟೂರು ಮುಳಬಾಗಿಲು. ಅಲ್ಲಿಯ ಶ್ರೀಮದಾಂಜನೇಯಸ್ವಾಮಿ ಸನ್ನಿಧಿ ಪ್ರಸಿದ್ಧವಾದದ್ದು. ವರ್ಷದ ೩೬೦ ದಿನವೂ ಆ ಸ್ವಾಮಿಗೆ ಕೇತಕೀ ಪುಷ್ಪ (ತಾಳೆಯ) ಪೂಜೆ ನಡೆಯುತ್ತಿತ್ತು. ಅದರ ನಿರ್ಮಾಲ್ಯದ ತಾಳೆ ರೇಕನ್ನು ಪ್ರಸಾದವೆಂದು ರೋಗಾಧಿ ಪೀಡಿತರ ತಲೆದಿಂಬಿನ ಕೆಳಗಿಡುವುದು ವಾಡಿಕೆ. ಅದು ರಕ್ಷೆಯೆಂದು ನಂಬಿಕೆ. ಇಂಥಾದ್ದು ಕೇತಕೀ (ಕೇದಗೆ=ತಾಳೆ). ನನಗೆ ಓದಲಿಕ್ಕೂ ಯೋಚಿಸಲಿಕ್ಕೂ ಕೊಂಚ-ಕೊಂಚವಾಗಿಯಾದರೂ ಬಿಡುವು ದೊರೆಯುತ್ತಿದ್ದ ಕಾಲವೊಂದಿತ್ತು. ಆ ಕಾಲದಲ್ಲಿ ಆಗಾಗ ಮನಸ್ಸಿಗೆ ಭಾವನೆಗಳು ಬರುತ್ತಿದ್ದದ್ದೂ ಉಂಟು. ಅವು ಬಂದಾಗ ಅವು ಹಾರಿ ಹೋಗುವುದಕ್ಕೆ ಮುನ್ನ ಅವುಗಳನ್ನು ಆಗ ತೋಚಿದ ಮಾತುಗಳಲ್ಲಿ, ಆಗ ಕೈಗೆ ಸಿಕ್ಕಿದ ಚೀಟಿಗಳಲ್ಲಿ, ಗುರುತುಹಾಕುತ್ತಿದ್ದದ್ದುಂಟು. ಅಂಥ ಚೀಟಿಗಳು ಈ ಪುಸ್ತಕವಾಗಿವೆ. ಒಟ್ಟಿನಲ್ಲಿ ಈ ಪುಸ್ತಕ ಇಂಗ್ಲಿಷಿನ ಪ್ರಭಾವ ಹೆಚ್ಚಾಗಿರುವ ಪ್ರಯತ್ನವಾಗಿದೆ.
ಇಂಡಿಯ ದೇಶದಲ್ಲಿ ವಿಗ್ರಹಶಿಲ್ಪಕ್ಕೆ ಹೆಸರಾಗಿರುವ ದೇವಲಯಗಳಲ್ಲಿ ಬೇಲೂರಿನದು ಮೊದಲಪಂಕ್ತಿಯದು,—ಮೊದಲನೆಯದು ಎಂದೂ ಹೇಳಬಹುದು. ಬೇಲೂರು ನಮ್ಮ ದೇಶದ ಪೂರ್ವಚರಿತ್ರೆಯಲ್ಲಿ ಅತ್ಯಂತ ಸ್ಮರಣೀಯವಾದ ಪಟ್ಟಣಗಳ ಪೈಕಿ ಒಂದು. ಅದು ಕೆಲವು ಶತಮಾನಕಾಲ ಹೊಯ್ಸಳರ ರಾಜಧಾನಿಯಾಗಿತ್ತು. ಹೊಯ್ಸಳ ರಾಜರುಗಳಲ್ಲಿ ಅತ್ಯಂತ ಪ್ರಸಿದ್ಧನಾದವನು ವಿಷ್ಣುವರ್ಧನ. ಆತ ಬಹು ಪರಾಕ್ರಮಶಾಲಿ; ತನ್ನ ರಾಜ್ಯವನ್ನು ಎಲ್ಲ ದಿಕ್ಕುಗಳಲ್ಲಿಯೂ ವಿಸ್ತರಿಸಿದ್ದವನು. ರಣರಂಗದಲ್ಲಿ ಆತನು ಹೇಗೆ ಜಯಶಾಲಿಯಾದವನೋ ರಾಜ್ಯಪಾಲನೆಯಲ್ಲಿಯೂ ಹಾಗೆ ಕೃತಸಂಕಲ್ಪನಾದವನು. ತಾನು ಸರಸ ಕಲಾಪ್ರಿಯನಾಗಿ, ತನ್ನ ಜನ ನಗುಮುಖದಿಂದ ನಲಿಯುವುದನ್ನು ನೋಡಬೇಕೆಂದು ಪರಿಶ್ರಮಿಸುತ್ತಿದ್ದವನು. ವಿಷ್ಣುವರ್ಧನನು ಕಟ್ಟಿಸಿದ ದೇವಾಲಯಗಳಲ್ಲಿ ಐದು ನಾರಾಯಣ ದೇವಾಂಕಿತವೆಂದು ಲೋಕದ ಹೇಳಿಕೆ. ಇವುಗಳಲ್ಲಿ ಐದನೆಯದು ಬೇಲೂರಿನ ದೇವರ ಹೆಸರು. ಅದೇ ದೇವರಿಗೆ ಸೌಮ್ಯನಾರಾಯಣನೆಂದೂ ಚೆನ್ನಕೇಶವನೆಂದೂ ಹೆಸರುಗಳು ರೂಢಿಯಾಗಿವೆ. ಈ ದೇವಸ್ಥಾನದ ಮುಖ್ಯ ವೈಶಿಷ್ಟ್ಯ ಅದರ ವಿಗ್ರಹಶಿಲ್ಪವೆಂದು ಮೊದಲೇ ಸೂಚಿಸಿದ್ದಾಗಿದೆ. ಶಿಲ್ಪದಲ್ಲಿ ವಾಸ್ತುಶಿಲ್ಪ, ವಿಗ್ರಹಶಿಲ್ಪ, ಯಂತ್ರಶಿಲ್ಪ ಮೊದಲಾದ ಅನೇಕ ವಿಭಾಗಗಳುಂಟಷ್ಟೆ ? ಅವುಗಳಲ್ಲಿ ವಾಸಗೃಹದ ನಿರ್ಮಾಣಕ್ಕೆ ಸಂಬಂಧಪಟ್ಟದ್ದು ವಾಸ್ತುಶಿಲ್ಪ (ಆರ್ಕಿಟೆಕ್ಚರ್‍), ಇದರಲ್ಲಿ ಕಲಾಂಶಕ್ಕಿಂತ ಉಪಯೋಗಾಂಶ ಹೆಚ್ಚಿನದು. ಕಲೆಯೆಂದರೆ ಸೌಂದರ್ಯ ಕಲ್ಪನೆ. ಈ ಕಟ್ಟಡದ ಸೊಬಗು ಇಷ್ಟಿದ್ದರೂ ಅದರ ವಿಶೇಷವಾದ ಆಕರ್ಷಣೆ ಅದರ ಪ್ರತಿಮೆಗಳದು. ಆ ಚಿತ್ರಸೌಂದರ್ಯವನ್ನು ಬರಿಯ ಮಾತುಗಳ ಮೂಲಕ ಕಾಣಿಸಲಾದೀತೆಂದಾಗಲಿ ಕಂಡುಕೊಳ್ಳಬಹುದೆಂದಾಗಲಿ ಯಾರಾದರೂ ಭಾವಿಸಿದ್ದರೆ ಅವರು ಭ್ರಾಂತರು. ಪ್ರತ್ಯಕ್ಷ ದರ್ಶನದಿಂದ ಸಾಧ್ಯವಾದ ಅನುಭವವು ವಾಙ್ಮಯ ವರ್ಣನೆಗೆ ಸಾಧ್ಯವಾಗುವ ಹಾಗಿದ್ದರೆ, ಆ ದೃಶ್ಯದಲ್ಲಿ ಅತಿಶಯದ ಸಂಗತಿಯೇನೂ ಇರದೆಂದೇ ಅರ್ಥ. ಯಥಾವತ್ತಾದ (ಫೋಟೋಗ್ರಾಫ್‍) ಛಾಯಾಬಿಂಬದಿಂದ ಸಹ ದೊರೆಯತಕ್ಕದ್ದಲ್ಲ ಆ ಸೌಂದರ್ಯಾನುಭವ. ಹೀಗಿದ್ದರೂ ಈ ಉಪನ್ಯಾಸದ ಉದ್ದೇಶ ನೆರವೇರಬೇಕಾದರೆ ವರ್ಣನೆಯ ಪ್ರಯತ್ನ ನನ್ನಿಂದ ಒಂದಷ್ಟು ಆಗಬೇಕಾಗಿದೆ.
ನಮ್ಮ ಪೂರ್ವಿಕರು ಮಕ್ಕಳಿಗೆ ಹೆಸರಿಡುವುದರಲ್ಲಿ ಒಂದು ವಿಶೇಷ ಪದ್ಧತಿಯನ್ನಿಟ್ಟುಕೊಂಡಿದ್ದರು. ಮೊದಲ ಎರಡು ಮೂರು ಮಕ್ಕಳು ಕಳೆದುಹೋಗಿದ್ದರೆ, ಮೂರನೆದಕ್ಕೋ ನಾಲ್ಕನೆಯದಕ್ಕೋ ಗುಂಡಪ್ಪ, ಕಲ್ಲಪ್ಪ, ತಿಪ್ಪಯ್ಯ, ಹುಚ್ಚಯ್ಯ- ಎಂದು ಹೆಸರು ಕೊಡುತ್ತಿದ್ದರು. ಅದರ ಭಾವ ಆ ಮಗುವಾದರೂ ಎಲ್ಲಾದರೂ ಗುಂಡುಕಲ್ಲಿನಂತೆ, ತಿಪ್ಪೆಯ ರಾಶಿಯಂತೆ, ಆಯುಸ್ಸುಂಟಾಗಿ ಬಾಳಿಕೊಳ್ಳಲಿ-ಎಂದು. ಈ ಗ್ರಂಥ ಮೊದಲು ಪ್ರಕಟವಾದಾಗ ಇದ್ದ ಮನೋಭಾವ ಅಂಥಾದ್ದು. ಇದು ಪಂಡಿತರನ್ನೂ ಪ್ರಸಿದ್ಧರನ್ನೂ ಪುಷ್ಟರನ್ನೂ ಉದ್ದೇಶಿಸಿದ್ದಲ್ಲ. ಬಹುಸಾಮಾನ್ಯರಾದವರ ಮನೆಯ ಬೆಳಕಿಗೆ ಇದು ಒಂದು ತೊಟ್ಟಿನಷ್ಟು ಎಣ್ಣೆಯಂತಾದರೆ ನನಗೆ ತೃಪ್ತಿ. ಕಗ್ಗ ಜೀವನದ ಆಳವಾದ ಪ್ರಶ್ನೆಗಳನ್ನು ಪರಿಶೋಧಿಸುತ್ತದೆ, ನಿರಂತರವಾಗಿ ಬದಲಾಗುವ ಜಗತ್ತಿನಲ್ಲಿ ಸಮತೋಲಿತ ಜೀವನವನ್ನು ಮುನ್ನಡೆಸಲು ನಮಗೆ ಸಲಹೆ ನೀಡುತ್ತದೆ. ಆದ್ದರಿಂದ, ಕಗ್ಗದ ಅನೇಕ ಪದ್ಯಗಳ ಸಂದೇಶವು ”ಸಮತ್ವ” ಆಗಿದೆ.
...ಈ ಪದ್ಯಗಳನ್ನು ‘ಪ್ರಬುದ್ಧ ಕರ್ಣಾಟಕ’ ಪತ್ರಿಕೆಯಲ್ಲಿ ಪ್ರಕಟಪಡಿಸಿರುವುದಕಾನನಗೆ ತ್ಸಾಹ ಸಹಯಗಳನ್ನು ಕೊಟ್ಟಿರುವುದಕ್ಕಾಗಿ ಅವರಲ್ಲೊಬ್ಬರಾದ ನನ್ನ ಮಿತ್ರರು ಶ್ರೀಮಾನ್‍ ಎ. ಆರ್‍. ಕೃಷ್ಣಶಾಸ್ತ್ರಿಗಳವರಿಗೆ ನನ್ನ ಮನಃಪೂರ್ವಕವಾದ ವಂದನೆಗಳು ವಿಶೇಷವಾಗಿ ಸಲ್ಲತಕ್ಕುವಗಿವೆ. ಈ ಪುಸ್ತಕದ ವಿಶೇಷ ಆಕರ್ಷಣೆಯು ಇದರ ಚಿತ್ರಗಳ ಸೌಂದರ್ಯದಲ್ಲಿರತಕ್ಕುದು. ಕರ್ಣಾಟಕ ಶಿಲ್ಪವೈಭವ ಪ್ರಕಾಶಕರೂ ನನ್ನ ಮಿತ್ರರೂ ಆದ ಶ್ರೀಮಾನ್‍ ಬಿ. ವೆಂಕೋಬರಾಯರವರು ಉಮರನ ಭಾವಚಿತ್ರವನ್ನೂ ಮುಖಪತ್ರದ ಅಲಂಕಾರ ಚಿತ್ರವನ್ನೂ ತಯಾರುಮಾಡಿಕೊಟ್ಟಿದ್ದಾರೆ. ಬೊಂಬಾಯಿ ಪಟ್ಟಣದ “ಟೈಮ್ಸ್‍ ಆಫ್‍ ಇಂಡಿಯ” (The Times of India) ಎಂಬ ಪ್ರಸಿದ್ಧ ಇಂಗ್ಲಿಷ್‍ ವೃತ್ತಪತ್ರಿಕೆಯ ಅಧಿಪತಿಗಳು ತಮ್ಮ ಸುಂದರವಾದ ವಾರ್ಷಿಕ ಸಂಚಿಕೆಗಳಲ್ಲಿ ಪ್ರಚುರವಾಗಿರುವ ಚಿತ್ರಪಟಗಳನ್ನು ಉಪಯೋಗಿಸಿಕೊಳ್ಳಲು ಅನುಮತಿಕೊಟ್ಟಿದ್ದಾರೆ....
ರಾಮಾಯಣದಲ್ಲಿ ಬರುವ ಅಹಲ್ಯೋದ್ಧಾರ, ವಾಲಿಯ ವಧೆ, ಸೀತಾಪರಿತ್ಯಾಗ ಮೊದಲಾದ ಜಟಿಲ ಸಮಸ್ಯೆಗಳನ್ನು ಡಿ. ವಿ. ಜಿ ಅವರು ಆರಿಸಿಕೊಂಡು. ಈ ಸಣ್ಣ ಕಾವ್ಯದಲ್ಲಿ ಶ್ರೀರಾಮನ ಸತ್ತ್ವಪರೀಕ್ಷಣವನ್ನು ನಮ್ಮ ಮುಂದಿಟ್ಟಿದ್ದಾರೆ. ಶ್ರೀರಾಮನಲ್ಲಿ ನಾವು ನೋಡಬೇಕಾದುದು ಕೇವಲ ಶೃಂಗಾರ ವೀರರಸಗಳನ್ನು ಮಾತ್ರವಲ್ಲ ; ಅವಕ್ಕಿಂತ ಹೆಚ್ಚಾಗಿ ಶಾಂತಿರಸವನ್ನು ನೋಡಬೇಕು. ಆತನ ಮನಸ್ಸು ಹೇಗೆ ಪರಿಪಾಕಕ್ಕೆ ಬಂದಿತು, ಆ ಆತ್ಮ ಹೇಗೆ ಸಂಸ್ಕಾರವನ್ನು ಪಡೆಯಿತು, ಅದರ ಫಲವಾಗಿ ಪರಮಾರ್ಥ ಆತನಿಗೆ ಹೇಗೆ ಕಂಡು ಬಂದಿತು–ಎಂಬಿವುಗಳನ್ನು ಚಿತ್ರಿಸುವುದು (ಕಾವ್ಯಕ್ಕೆ ಒಂದು ಉದ್ದೇಶವಿರುವುದಾದರೆ) ಡಿ. ವಿ. ಜಿ. ಅವರ ಉದ್ದೇಶವೆಂದು ಹೇಳಬೇಕಾಗಿದೆ. ಲಾಕ್ಷಣಿಕರು ಶೃಂಗಾರ ವೀರರಸಗಳನ್ನೂ ಕರುಣರಸವನ್ನೂ ಕಾವ್ಯರಸಗಳನ್ನಾಗಿ ಗಣಿಸಿದಂತೆ ಶಾಂತಿರಸವನ್ನೂ ಗಣಿಸಿದ್ದಾರೆ. ಜೀವನವನ್ನು ಖಂಡದೃಷ್ಟಿಯಿಂದ ನೋಡುವವರು ಕೇವಲ ಶೃಂಗಾರ ಲಾಲಸೆಯ, ಪ್ರಲಾಪದ, ಆಕ್ರೋಶಗಳ ಸ್ವರಗಳನ್ನು ಮಾತ್ರ ನುಡಿಸಬಹುದು. ಜೀವನವನ್ನು ಸಮಗ್ರ ದೃಷ್ಟಿಯಿಂದ ನೋಡುವವರು ಅದರಲ್ಲಿ ಆಲೋಚನೆ, ವಿವೇಚನೆ, ಧ್ಯಾನ, ಉಪಶಮನ, ತತ್ತ್ವಗ್ರಹಣ–ಈ ಸ್ವರಗಳಿರುವುದನ್ನೂ ತಿಳಿಯುವರು; ಮತ್ತು ಕಾವ್ಯದಿಂದಲೂ ಆತ್ಮೋದ್ಧಾರವುಂಟೆಂಬುದನ್ನು ಜಗತ್ತಿಗೆ ತೋರಿಸುವರು. ಮನಸ್ಸಿನ ಚಲನೆ, ಉದ್ವೇಗ, ಚಿಂತೆ, ವಿಚಾರ, ತತ್ತ್ವದರ್ಶನ, ಚಿತ್ತಸಮಾಧಾನ, ಶಾಂತಿ-ಇವು ಮನುಷ್ಯನಲ್ಲಾಗುವ ರಸಪರಿಪಾಕದ ಕ್ರಮ. ಶ್ರೀರಾಮನು ಪುರಾಣಪುರುಷನಾದರೂ ಮನುಷ್ಯಲೋಕದಿಂದ ಹೊರಗಿರುವವನಲ್ಲ. ಅತನು ಕೂಡ ವಿಚಾರಮಾಡಿದ್ದಾನೆ. ಸಾಧನೆ ಮಾಡಿದ್ದಾನೆ, ಮತ್ತು ಕತ್ತಲೆಯಿಂದ ಬೆಳಕಿಗೆ ಬಂದಿದ್ದಾನೆ. ಅಹಲ್ಯೆ, ವಾಲಿ, ಸೀತೆ ಮೊದಲಾದ ಪಾತ್ರಗಳು ಶ್ರೀರಾಮನು ನಡಸಿದ ಸಾಧನೆಯಲ್ಲಿ ಕ್ರಮಶಃ ಬರುವ ಮೆಟ್ಟಲುಗಳು. ಪಾಪವೃತ್ತಾಂತದಿಂದ ಮನಃಪರಿತಾಪ; ಆತ್ಮತಾಪದಿಂದ ಧರ್ಮವಿಚಾರಕುತೂಹಲ ; ಈ ವಿಚಾರಕುತೂಹಲದಿಂದ ಮಾನವ ಸ್ವಭಾವಪರಾಮರ್ಶೆ ; ಅದರಿಂದ ಸೃಷ್ಟಿತತ್ತ್ವಚಿಂತನೆ, ವಿಶ್ವಸಹಾನುಭೂತಿ, ವಿಶ್ವವ್ಯಾಪಕ ದೃಷ್ಟಿ, ಪರತತ್ತ್ವದರ್ಶನ, ಪರಮಶಾಂತಿ–ಇವು ಹೇಗೆ ಕ್ರಮಕ್ರಮವಾಗಿ ಶ್ರೀರಾಮನಲ್ಲಿ ನೆಲೆಗೊಂಡವೆಂಬುದನ್ನೂ, ಸಂಕ್ಷೋಭೆಯಿಂದ ಸ್ವಸ್ಥಭಾವಕ್ಕೆ ಆ ಉತ್ತಮಜೀವ ಹೇಗೆ ಯಾತ್ರೆ ನಡಸಿತೆಂಬುದನ್ನೂ ಡಿ. ವಿ. ಜಿ. ಅವರು ನಮ್ಮ ಮುಂದಿಟ್ಟಿದ್ದಾರೆ; ಈ ಆತ್ಮ ಸಂಸ್ಕಾರದ ಚಿತ್ರವನ್ನು ಸುಲಭವಾಗಿ ನಾವು ಗ್ರಹಿಸುವಂತೆ ಆಯಾ ಪಾತ್ರಗಳನ್ನು ತಂದುಕೊಂಡು. ಅವರವರ ಬಾಯಿಂದಲೇ ಅವರವರ ಮನೋಭಾವಗಳನ್ನೂ ವಾದಗಳನ್ನೂ ಹೇಳಿಸಿ, ನಾಟಕದ ದಿವ್ಯಕಳೆಯನ್ನು ಈ ಕಾವ್ಯಕ್ಕೆ ಕೊಟ್ಟಿದ್ದಾರೆ. ರಸಜ್ಞರಿಗೆ ಕಾವ್ಯಾಮೃತ, ಲೌಕಿಕರಿಗೆ ಧರ್ಮಸೂಕ್ಷ್ಮಗಳ ಮತ್ತು ಜೀವನರಹಸ್ಯಗಳ ಬೋಧೆ, ಮುಮುಕ್ಷುಗಳಿಗೆ ಅಧ್ಯಾತ್ಮಜ್ಞಾನ–ಈ ಮೂರು ಈ ಸಣ್ಣ ಕಾವ್ಯದಲ್ಲಿ ದೊರೆಯುವುದರಿಂದ ನಮ್ಮ ಜೀವನ ಯಾತ್ರೆಯೂ ಸಹ ಕ್ರಮವಾಗಿ ಈ ಮೆಟ್ಟಲುಗಳನ್ನು ಹತ್ತಿ ಕಡೆಗೆ ಮೌನಗಂಭೀರದ ನಿತ್ಯಶಾಂತಿಯಲ್ಲಿ ಪರಿಣಾಮಕಾರಿಯಾಗಲೆಂದು ಡಿ. ವಿ. ಜಿ. ಅವರು ಹಾರೈಸುತ್ತಾರೆಂದು ತೋರುತ್ತದೆ. ಶೈಲಿಯ ವಿಷಯದಲ್ಲಿ ಒಂದು ಮಾತು. ಡಿ. ವಿ. ಜಿ. ಅವರು ಹಳೆಗನ್ನಡ ಮತ್ತು ಹೊಸಕನ್ನಡ ಶೈಲಿಗಳೆರಡರಲ್ಲಿಯೂ ನುರಿತ ಕೈ. ಅವರ ಕಂದಗಳನ್ನೂ ವೃತ್ತಗಳನ್ನೂ ಓದುವಾಗ ಪಂಪ ರನ್ನರನ್ನು ಓದುತ್ತಿರುವಂತೆ ಭಾಸವಾಗುತ್ತದೆ. ಈಗಿನ ಹೊಸ ಛಂದಸ್ಸುಗಳ, ಭಾವಗೀತಗಳ, ಸರಳ ರಗಳೆಗಳ ಪರಿಸರಣದಲ್ಲಿ ಆ ಹಿಂದಿನ ಶೈಲಿ ಧೀರಗಂಭೀರ ವಾತಾವರಣವನ್ನು ತಂದಿರುತ್ತದೆ. ಅವರ ದ್ವಿಪದಿಗಳೂ ಸೀಸಪದ್ಯಗಳೂ ಆಧುನಿಕ ಸಾಹಿತ್ಯದ ಮೇಲ್ಮಟ್ಟವನ್ನು ಮುಟ್ಟಿರುತ್ತವೆ. ಡಿ. ಇ. ಜಿ. ಅವರು ಪೂರ್ವಿಕರೂ ಅಹುದು, ಆಧುನಿಕರೂ ಅಹುದು ಎಂಬುದನ್ನು ಈ ಸಣ್ಣ ಕಾವ್ಯ ಚೆನ್ನಾಗಿ ತೋರಿಸಿಕೊಡುತ್ತದೆ.
ಕೆಲವು ವರ್ಷಗಳಿಂದ ನಾನು ಅರೆಕುರುಡ; ಅರೆಯುಸಿರಿನವನು. ಈ ಅವಸ್ಥೆಯಲ್ಲಿ ನಿದ್ದೆಬಾರದಾಗ, ಆಯಾಸವಾದಾಗ, ತೋರಿಬಂದ ಭಾವನೆಗಳನ್ನು ಆಗ್ಗೆ ಒದಗಿಬಂದ ಮಾತಿನಲ್ಲಿ. ಆ ಸಮಯಕ್ಕೆ ಸಿಕ್ಕಿದ ಕಾಗದದ ಚೂರಿನಲ್ಲಿ. ಆಗ ಕೈಗೆ ದೊರೆತ ಲೇಖನಿಯಿಂದ ಗುರುತು ಮಾಡಿದ್ದಾಯಿತು. ಆದರೆ ಅವುಗಳನ್ನು ಒಂದು ಕ್ರಮದಲ್ಲಿ ಜೋಡಿಸಬೇಕೆಂದು ನೋಡಿದಾಗ ನಾನು ಗೀಚಿದ್ದ ಗೀಟುಗಳು ನನಗೆ ಅರ್ಥವಾಗದೆಹೋಯಿತು. ಈ ಕಷ್ಟಸ್ಥಿತಿಯಲ್ಲಿ ನನ್ನ ಗುರುತುಚೀಟಿಗಳ ಸಿಕ್ಕು ಬಿಡಿಸಿ ಓದಲಾಗುವಂತೆ ಮಾಡಿದವರು ನಾಲ್ವರೈವರು ಸ್ನೇಹಿತರು. ಅವರಲ್ಲಿ ನಾನು ಹೇಳಲೇಬೇಕೆಂದು ಗೊತ್ತುಮಾಡಿಕೊಂಡಿರುವ ಹೆಸರುಗಳು ಎರಡು : ಚಿ ॥ ಬಿ. ಎಸ್‍. ಸುಬ್ಬರಾಯರು. ಚಿ ॥ ಡಿ. ಆರ್‍. ವೆಂಕಟರಮಣನ್‍. ಈ ಸ್ನೇಹಿತರು ನನ್ನ ಕರಡುಗಳನ್ನು ಕೊಂಚಮಟ್ಟಿಗೆ ಅಳವಡಿಸಿ ಕೊಟ್ಟಮೇಲೆ ಬರವಣಿಗೆಯನ್ನೆಲ್ಲ ಆಮೂಲಾಗ್ರವಾಗಿ ಓದಿ ವಿರಳ ವಿರಳವಾಗಿ ನಕಲು ಬರೆದುಕೊಟ್ಟವರು ಚಿ ॥ ಎಸ್‍. ಆರ್‍. ರಾಮಸ್ವಾಮಿ. ಈತ ಅಂದವಾದ ನಕಲನ್ನು ತಯಾರುಮಾಡಿದ್ದಷ್ಟೇ ಅಲ್ಲ; ಬಿಡಿಬಿಡಿಯಾಗಿ ಬಿದ್ದಿದ್ದ ಪದ್ಯಗಳನ್ನು ಒಂದು ಸಮಂಜಸವಾದ ಕ್ರಮದಲ್ಲಿ ಜೋಡಿಸಿ, ಅರ್ಥ ಸುಲಭವಾಗುವಂತೆ ಅಣಿಮಾಡಿಕೊಟ್ಟಿದ್ದಾರೆ, ಮತ್ತು ಪ್ರಕರಣ ವಿಭಾಗಮಾಡಿ ಶೀರ್ಷಿಕೆಗಳನ್ನು ಬರೆದು ಸಾಂಗೋಪಾಂಗವಾಗಿ ಮುದ್ರಣಕ್ಕೆ ಸಿದ್ಧಪಡಿಸಿದ್ದಾರೆ. ಅಲ್ಲದೆ ಅರ್ಥಕೋಶವನ್ನೂ ಕರಂಡಗಳನ್ನು ಕುರಿತ ಅನುಬಂಧವನ್ನೂ ರಚಿಸಿಕೊಟ್ಟಿದ್ದಾರೆ. ಈ ಚಿರಂಜೀವಿಯ ಕೆಲಸವನ್ನು ಪೂರ್ತಿಯಾಗಿ ವಿವರಿಸುವುದು ಸಾಧ್ಯವಲ್ಲದ ಕೆಲಸ.
ಪುರುಷ ಸೂಕ್ತವು ಋಗ್ವೇದ ಸಂಹಿತೆಯ ೮ ನೆಯ ಅಷ್ಟಕದ ೪ ನೆಯ ಅಧ್ಯಾಯದ ೧೭-೧೯ ನೆಯ ವರ್ಗಗಳಲ್ಲಿ.... ಹದಿನಾರು ಋಕ್ಕುಗಳುಳ್ಳ ಭಾಗ ... ಈ ಮಂತ್ರಗಳು “ಪುರುಷ” ನನ್ನು - ಎಂದರೆ ಪುರುಷೋತ್ತಮನಾದ ಶ್ರೀಮನ್ನಾರಾಯಣನನ್ನು - ಕುರಿತವಾದದ್ದರಿಂದ ಅವಕ್ಕೆ “ಪುರುಷ ಸೂಕ್ತ” ವೆಂದೂ “ನಾರಾಯಣ” ಅಥವಾ “ನಾರಾಯಣೀಯ” ವೆಂದೂ ಹೆಸರೆಂದು ಒಂದು ನಾಮನಿಷ್ಪತ್ತಿ. ಪುರುಷಸೂಕ್ತವೆಂದರೆ ಪುರುಷನನ್ನು ಕುರಿತಸೂಕ್ತ. ಪುರುಷ ಎಂದರೆ ಪರಮಾತ್ಮ. ಯಾವ ಮಹಾಸತ್ತ್ವವು ಮನುಷ್ಯನಿಗೆ ತಿಳಿದಿರುವ ಎಲ್ಲದರಲ್ಲಿಯೂ ತುಂಬಿಕೊಂಡು ಜಗದಾಕಾರವಾಗಿರುತ್ತದೆಯೋ ಅದೇ “ಪುರುಷ”. ಸೂಕ್ತವೆಂದರೆ (ಸು+ಉಕ್ತ) “ಸರಿಯಾದ ಹೇಳಿಕೆ”. ಚರಾಚರ ಪ್ರಪಂಚದಲ್ಲಿ ಅಂತರ್ಯಾಮಿಯಾಗಿದ್ದುಕೊಂಡು ಜೀವಲೀಲೆಯಲ್ಲಿ ನಮಗೆ ಗೋಚರವಾಗಿರುವ ಪರಮಾತ್ಮ ವಸ್ತುವನ್ನು ಕುರಿತ ಪ್ರಮಾಣ ವಾಕ್ಯವೇ “ಪುರುಷ ಸೂಕ್ತ”. - ‘ಗ್ರಂಥವಿಚಾರ’ದಿಂದ
ಈಶೋಪನಿಷತ್ತು ಈಶೋಪನಿಷತ್ತಿನ ೯-೧೧ ನೆಯ ಮಂತ್ರಗಳಲ್ಲಿ (ಪುಟ ೭೮-೭೯, ೯೩) ಬರುವ (i) “ವಿದ್ಯೆ”, “ಅವಿದ್ಯೆ” ಎಂಬ ಪದಗಳ, ಮತ್ತು (ii) ೧೨-೧೪ನೆಯ ಮಂತ್ರಗಳ (ಪುಟ ೮೩, ೯೪) “ಸಂಭೂತಿ”, “ಅಸಂಭೂತಿ” ಎಂಬ ಪದಗಳ ಅರ್ಥವನ್ನು ಕುರಿತು ಪೂರ್ವಕಾಲದಿಂದ ಅಭಿಪ್ರಾಯಭೇದಗಳು ಬಂದಿವೆ. ಈ ಅರ್ಥಭೇದಕ್ಕೆ ಆಯಾ ವ್ಯಾಖ್ಯಾತರು (i) ಕರ್ಮ-ಜ್ಞಾನಗಳ ಮತ್ತು (ii) ಲೌಕಿಕ-ವೈರಾಗ್ಯಗಳ ಪರಸ್ಪರ ಸಂಬಂಧವನ್ನು ಕುರಿತು ಇಟ್ಟುಕೊಂಡಿದ್ದ ಭಾವನಾಭೇದಗಳೇ ಕಾರಣ. ಆ ಎರಾಡು ಜೋಡಿಗಳಲ್ಲಿ ಪ್ರತಿಯೊಂದು ಜೋಡಿಯ ಎರಡಂಶಗಳೂ ಅನ್ಯೋನ್ಯ ವಿರೋಧಿಗಳಲ್ಲ, ಸಹಕಾರಿಗಳು; (i) ಕರ್ಮವು ಜ್ಞಾನಕ್ಕೆ ಮೆಟ್ಟಲು, ಜ್ಞಾನವು ಕರ್ಮಕ್ಕೆ ಫಲ; ಹಾಗೆಯೇ (ii) ಲೌಕಿಕವು ವೈರಾಗ್ಯಕ್ಕೆ ಪೂರ್ವಸಿದ್ಧತೆ; ವೈರಾಗ್ಯವು ಲೌಕಿಕದ ಪುಷ್ಪಸೌರಭ. ಹೀಗೆ ಆ ಜೋಡಿಗಳ ಉಭಯಾಂಶಗಳೂ ವಾಸ್ತವವಾಗಿ ಬೇರೆಬೇರೆಯಲ್ಲ, ಅವು ಕೂಡಿಕೊಂಡೇ ಇರುತ್ತವೆ-ಒಂದೇ ಕೋಲಿನ ಎರಡು ಕೊನೆಗಳಂತೆ. ಪ್ರವೃತ್ತಿ ನಿವೃತ್ತಿಗಳೆರಡೂ ಒಂದೇ ಧರ್ಮದ ಎರಡು ಪಕ್ಕಗಳು: ಹೀಗೆಂಬುದು ಈ ಉಪನಿಷತ್ತಿನ ತಾತ್ಪರ್ಯವೆಂದು ನಾನು ನಂಬಿಕೊಂಡಿದ್ದೇನೆ. ಲೋಕಸಂಪರ್ಕವು ಜೀವಕ್ಕೆ ಸಂಕಟ ಕಷ್ಟಗಳನ್ನು ತಂದು ಜೀವವನ್ನು ಪರೀಕ್ಷೆಗೆ ಗುರಿಪಡಿಸಿ ಶೋಧನೆ ಮಾಡಿಸುತ್ತದೆ. ಹಾಗೆಯೇ ಸುಖಸಂತೋಷಗಳು ಕೂಡ ಜೀವದಲ್ಲಿಯ ಲೋಕಮೈತ್ರಿ, ಜೀವನೋತ್ಸಾಹ ಮೊದಲಾದ ಗುಣಗಳನ್ನು ಉತ್ತೇಜನಪಡಿಸಿ ಸಂಸ್ಕಾರಕಾರಕಗಳಾಗುತ್ತವೆ. ಹೀಗೆ ಲೋಕಜೀವನದಲ್ಲಿ ಮಿಳಿತವಾಗುವುದು ತತ್ತ್ವಜ್ಞಾನಕ್ಕೆ ಅವಶ್ಯವಾದ ಒಂದು ಮನಸ್ಸಂಸ್ಕಾರ. “ಅಸಂಭೂತಿ”, “ಅಸಂಭವ”, “ವಿನಾಶ”-ಈ ಮೂರು ಪದಗಳೂ ಸಮಾನಾರ್ಥಕಗಳಾಗಿ ಪ್ರಯೋಗಿಸಲ್ಪಟ್ಟಿವೆ (ಮಂತ್ರ ೧೨-೧೪). ಆ ಅರ್ಥವು ನಿರ್ದೇಶಿಸುವ ವಸ್ತು ಯಾವುದು? ಆ ವಸ್ತುವು “ಸಂಭೂತಿ”, “ಸಂಭವ”-ಎಂಬುದರಿಂದ ಸೂಚಿತವಾದ ವಸ್ತುವಿಗಿಂತ ಲಕ್ಷಣದಲ್ಲಿ ಬೇರೆಯಾದದ್ದು; ಅದು ಜಗತ್ತು. ಅದರ ವಿಷಯದಲ್ಲಿ ಉಪನಿಷತ್ತು ಇನ್ನೂ ಎರಡು ಮಾತುಗಳನ್ನು ಸೂಚಿಸಿದೆ: (೧) ಆ ವಸ್ತುವನ್ನು ಜನ ಉಪಾಸಿಸುತ್ತಿದ್ದಾರೆ; (೨) ಅದರಿಂದ ಒಳ್ಳೆಯದಾಗುವುದು ಸಾಧ್ಯವಿದೆ. ಅಂಥಾ ವಸ್ತು ಯಾವುದು? ಸ್ವತಂತ್ರವಾದ ಅಸ್ತಿತ್ವವಿಲ್ಲದ್ದು, ವಾಸ್ತವವಾಗಿರದೆ ತೋರಿಕೆಯ ಮಟ್ಟಿಗಿರುವುದು. ನಾಶವಾಗತಕ್ಕದ್ದು; ಜನಕ್ಕೆ ಬೇಕೆನಿಸಿರುವುದು; ಕಿಂಚಿತ್ತು ಉಪಕಾರ ಮಾಡಲೂ ಬಲ್ಲದ್ದು-ಈ ಎಲ್ಲ ಲಕ್ಷಣಗಳೂ ಜಗತ್ತಿನಲ್ಲಿವೆ. ಜಗತ್ತು ಕೇವಲ ಶ್ರೇಷ್ಠವೇನೂ ಅಲ್ಲ: ಆದರೆ ಅದು ಕೇವಲ ತುಚ್ಛವೂ ಅಲ್ಲ. ನಮ್ಮ ಆತ್ಮೋದ್ಧಾರಕ್ಕಾಗಿ ಅದರಿಂದ ದೊರೆಯಬೇಕಾದ ಸಹಾಯವೂ ಒಂದಷ್ಟಿದೆ. ಜಗತ್ತು ಈಶ್ವರನದೆಂಬ ದೃಷ್ಟಿಯಿಂದ ನಾವು ಅದನ್ನು ಕಂಡರೆ ಆಗ ಅದು ನಮಗೆ ಬಂಧನವಾಗಿರುವುದು ಹೋಗಿ ತಾರಕವಾದೀತು-ಎಂಬಿದು ಈಶಾವಾಸ್ಯದ ಉಪದೇಶ.
ನಮ್ಮ ದೇಶ ಈಹೊತ್ತು ನಮ್ಮಿಂದ ಒಂದು ವಿಶೇಷ ರೀತಿಯ ಸೇವೆಯನ್ನು ಅಪೇಕ್ಷಿಸುತ್ತಿದೆಯೆಂದು ಈ ಉಪನ್ಯಾಸದ ಶೀರ್ಷಿಕೆಯಿಂದಲೇ ಸಿದ್ಧವಾಗುತ್ತದಲ್ಲವೆ? ಆ ಸೇವೆ ಎಂಥಾದ್ದು? ಇದನ್ನು ಕುರಿತು ತಮ್ಮೆಲ್ಲರೊಡನೆ ಕಲೆತು ಆಲೋಚನೆ ಮಾಡಬೇಕೆಂಬುದು ನನ್ನ ಉದ್ದೇಶ. ನಾನು ಯಾವ ಒಂದು ಮತವನ್ನಾಗಲಿ ಅಭಿಪ್ರಾಯವನ್ನಾಗಲಿ ಪಟ್ಟುಹಿಡಿದು ಪ್ರತಿಪಾದನೆ ಮಾಡಬೇಕೆಂದು ಇಲ್ಲಿಗೆ ಬಂದಿಲ್ಲ. ಯಾವ ಪ್ರಶ್ನೆಗಳು ನನ್ನ ಮನಸ್ಸನ್ನು ಡೋಲಾಯಮಾನವಾಗಿ ಮಾಡಿವೆಯೋ ಆ ಪ್ರಶ್ನೆಗಳನ್ನು ತಾವೂ ವಿಚಾರಮಾಡಬೇಕೆಂಬುದು ನನ್ನ ಕೋರಿಕೆ. “ಈ ಹೊತ್ತು” ಎಂದು ಹೇಳಿದೆ. ಹಾಗೆಂದರೆ ಏನು? ಈಹೊತ್ತು ಎಂಬುದು ನಿನ್ನೆಯ ಮುಂಬರಿಕೆ. ನಾಳೆಯೆಂಬುದು ಈಹೋತ್ತಿನ ಮುಂಬರಿಕೆ. ಹೀಗೆ ಕಾಲವು ಒಂದು ಅಖಂಡವಾಗಿ ಹರಿಯುವ ನದಿ. ನಮ್ಮ ವ್ಯವಹಾರದ ಅನುಕೂಲಕ್ಕೋಸ್ಕರ ನಾವು ಅದರಲ್ಲಿ ಈಹೊತ್ತು, ನಾಳೆ ಎಂದುಮೊದಲಾಗಿ ಗುರುತು ಮಾಡಿಕೊಳ್ಳುತ್ತೇವೆ. ಹೀಗೆ ವ್ಯವಹಾರದ ದೃಷ್ಟಿಯಿಂದ ನಮ್ಮ ಈಹೊತ್ತಿನ ಪ್ರಸಂಗಕ್ಕೆ ಯಾವುದೋ ಒಂದು ದಿವಸವನ್ನು ಪ್ರಾರಂಭವಾಗಿ ಇರಿಸಿಕೊಳ್ಳಬೇಕಾದುತ್ತದೆ. ನನಗೆ ಅಂಥ ದಿನ ೧೮೮೫ ಎಂಬುದು ಸರಿಯಾದದ್ದೆಂದು ತೋರುತ್ತದೆ. ಅದು ನ್ಯಾಷನಲ್‍ ಕಾಂಗ್ರೆಸ್‍ ಸಂಸ್ಥೆ ಹುಟ್ಟಿದ ವರ್ಷ.
ಕಳೆದ ಮಾರ್ಚಿ ತಿಂಗಳಲ್ಲಿ ಕಲ್ಕತ್ತೆಯಲ್ಲಿ ಭಾರತ ಸಮಷ್ಟಿಯ ಸರಕಾರೀ ಭಾಷೆಯ ವಿಚಾರಕ್ಕಾಗಿ ಶ್ರೀಮಾನ್‍ ಸಿ. ರಾಜಗೋಪಾಲಾಚಾರ್ಯರವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಗೆ ನಾನು ಕಳುಹಿಸಿದ್ದ ಅಭಿಪ್ರಾಯ ನಿರೂಪಣೆಯ ಕೆಲವು ಭಾಗ ಮದರಾಸಿನ “ಹಿಂದೂ” ಪತ್ರಿಕೆಯ ೮-೩-೧೯೫೬ರ ಸಂಚಿಕೆಯಲ್ಲಿ ಪ್ರಕಟವಾಯಿತು. ಅದನ್ನು ಕುರಿತು ನನಗೆ ಇಂಡಿಯದ ನಾನಾ ಪ್ರಾಂತಗಳಿಂದಲೂ ಅಮೆರಿಕ ಇಂಗ್ಲೆಂಡುಗಳಿಂದಲೂ ಬಂದ ಪ್ರೋತ್ಸಾಹ ಪತ್ರಗಳಲ್ಲಿ ಒಂದು ಹುಬ್ಬಳ್ಳಿಯ ಪ್ರಸಿದ್ಧ ವ್ಯಾಪಾರಿಗಳು ಶ್ರೀ ಎಸ್‍. ಎಸ್‍. ವಾಲಿ ಅವರದು. ಅವರು ಆ ಇಂಗ್ಲಿಷ್‍ ಲೇಖನವನ್ನು ಕನ್ನಡಿಸಿ ಪ್ರಕಟಿಸಬೇಕೆಂದು ಸೂಚಿಸಿ ಆ ಬಗ್ಗೆ ಸಹಾಯದ್ರವ್ಯವನ್ನು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಗೆ ಕಳುಹಿಸಿದರು. ಅದರ ಜೊತೆಗೆ ಬೆಂಗಳೂರಿನ “ಮೈಸೂರು ಮೆಷೀನ್‍ ಟೂಲ್ಸ್ ‍” ಕಾರ್ಖಾನೆಯ ಶ್ರೀ ಟಿ. ಶ್ರೀನಿವಾಸನ್‍ ಅವರು ತಮ್ಮ ಸಹಾಯ ಸೇರಿಸಿದರು. ಆ ಔದಾರ್ಯದ ಫಲಿತಾಂಶ ಈ ಸಣ್ಣ ಪ್ರಕಟನೆ. “ಹಿಂದೂ” ಪತ್ರಿಕೆಯಲ್ಲಿ ಬಂದದ್ದರ ಜೊತೆಗೆ ಇನ್ನೂ ಕೆಲವಂಶಗಳನ್ನು ಇಲ್ಲಿ ಸೇರಿಸಿದೆ.
ಮೈಸೂರು ಸಂಸ್ಥಾನದಲ್ಲಿ ಸಮಸ್ತರಲ್ಲಿಯೂ ಈಚೆಗೆ ಸ್ವದೇಶೋನ್ನತಿಯ ಚಿಂತೆಯು ಹೆಚ್ಚಾಗಿ ತಲೆದೋರುತ್ತಿದೆಯಷ್ಟೆ. “ಇದು ನಮ್ಮ ರಾಜ್ಯ, ಇದರ ಏಳಿಗೆಯೂ ನಮ್ಮ ಸ್ವಂತ ಏಳಿಗೆಯೂ ಅಭೇದ್ಯವಾಗಿ ಸಂಬಂಧಪಟ್ಟಿವೆ. ದೇಶಾಭಿವೃದ್ಥಿಯ ಕಾರ್ಯಗಳು ತೃಪ್ತಿಕರವಾಗಿ ನಡೆದ ಹೊರತು ನಮ್ಮ ಅಭಿವೃದ್ಧಿಯು. ನಿಜವಾಗಿ ಆಗಲಾರದು” – ಎಂಬ ಭಾವನೆಯು ಜನರಲ್ಲಿ ಈಗ ವಿಶೇಷವಾಗಿ ಹರಡಿಯೂ ಹರಡುತ್ತಲೂ ಇದೆ. ಇದಕ್ಕೆ ಶ್ರೀಮನ್ಮಹಾರಾಜರವರೂ, ಅವರ ಸರ್ಕಾರದವರೂ ತೋರುತ್ತಿರುವ ಪ್ರಜಾಭಿಮಾನವೇ ಕಾರಣವೆಂಬುದರಲ್ಲಿ, ಸಂಶಯವಿಲ್ಲ. ಲೆಜಿಸ್ಲೇಟಿವ್‍ ಕೌನ್ಸಿಲ್‍ ಮುಂತಾದ ರಾಜಕೀಯ ಸಭೆಗಳಲ್ಲಿಯೂ, ಇತರ ಮಾರ್ಗಗಳಲ್ಲಿಯೂ ಪ್ರಜಾಪ್ರಮುಖರು ಮುಂದಕ್ಕೆ ಬಂದು, ದೇಶಸೇವೆ ಮಾಡಲು ಅವಕಾಶಗಳುಂಟಾಗಿರುವುದರಿಂದಲೂ, ಪ್ರಜಾಭಿಪ್ರಾಯಕ್ಕೆ ಈಗ ಗೌರವವು ಹೆಚ್ಚಿರುವುದರಿಂದಲೂ, ದೇಶಾಭ್ಯುದಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಸರಿಯಾಗಿ ತಿಳಿದುಕೊಳ್ಳುವುದು ಸರ್ವರಿಗೂ ಕರ್ತವ್ಯವಾಗಿದೆ. ಪ್ರಕೃತ ಸ್ಥಿತಿಯನ್ನು ವಿಚಾರಿಸದೆಯೇ ಪುರೋಭಿವೃದ್ಧಿಯ ಮಾರ್ಗಗಳನ್ನು ನಿಶ್ಚಯಿಸುವುದು ಸುಲಭವಲ್ಲ. ಪ್ರಕೃತ ಸ್ಥಿತಿಯನ್ನು ಸಾಧ್ಯವಾದಷ್ಟು ವಿಶದವಾಗಿ ತಿಳಿಸಬೇಕೆಂಬುದೇ ಈ ಪುಸ್ತಕದ ಉದ್ದೇಶ್ಯ. ವಿಷಯಾನುಕ್ರಮಣಿಕೆಯನ್ನು ನೋಡುವುದರಿಂದ ಇದರಲ್ಲಿ ಎಷ್ಟು ಬಗೆಯ ವಿಷಯಗಳು ಸಂಗ್ರಹಿಸಲ್ಪಟ್ಟಿವೆಯೆಂಬುದು ಗೋಚರವಾಗುವುದು.
©2019 GoogleSite Terms of ServicePrivacyDevelopersArtistsAbout Google|Location: United StatesLanguage: English (United States)
By purchasing this item, you are transacting with Google Payments and agreeing to the Google Payments Terms of Service and Privacy Notice.