ಇದೊಂದು ಸುಂದರ ಸ್ವಪ್ನಗಳಿಂದ ಇಳಿದುಬಂದ ಲೋಕ. ಶುಭ್ರ ನೀಲ ಸರೋವರಗಳಾಳದಲ್ಲಿ ಹಿಮಚ್ಛಾದಿತ ಶಿಖರಗಳ ಬಿಂಬನನ್ನಾರಿಸುವ ಪ್ರೇಮಿಗಳು, ಹಿಮದಾಳದಲ್ಲಿ ಹರಿಯುವ ಕೊರೆವನೀರಿಗೆ ಗಾಳಹಾಕಿ ಕೂರುವ ಏಕಾಂತ ಪ್ರಿಯರು, ನಾಯಿಗಳೆಳೆಯುವ ಸ್ಲೆಡ್ಜ್ ಗಳಲ್ಲಿ ಶಿಖಾರಿ ಹೊರಡುವ ಸಾಹಸಿಗಳು, ಹೀಗೆ ಎಲ್ಲರಿಗೂ ಇದೊಂದು ಕಿನ್ನರ ಲೋಕ. ಪರಿಸರ ಹಾಗೂ ಜೀವವಿಜ್ಞಾನಿಗಳಿಗಂತೂ ಅಲಾಸ್ಕ ಕುರಿತು ಹುಚ್ಚು ಆಸಕ್ತಿ. ಅತ್ಯಂತ ವಿಶಿಷ್ಟವಾದ, ಸೂಕ್ಷ್ಮವಾದ ಇದರ ಟಂಡ್ರಾ ಇಕೋಸಿಸ್ಟಮ್, ಉತ್ತರ ಅಮೇರಿಕಾದಲ್ಲೇ ಅತಿಹೆಚ್ಚು ಸಸ್ಯ, ಪ್ರಾಣಿ ಹಾಗೂ ಪಕ್ಷಿಗಳ ತಂಗುದಾಣ. ಸಾವಿರಾರು ಸಂಖೆಗಳಲ್ಲಿ ವಾಸಮಾಡುವ ಹಿಮಕರಡಿ, ಸಟ್ಕಾ ಜಿಂಕೆ, ನೀರುನಾಯಗಳನ್ನು ಕುರಿತು ಅಧ್ಯಯನ ಮಾಡಲು ಇದು ಪ್ರಶಸ್ಥವಾದ ಸ್ಥಳ.
(ಆಪತ್ತಿನ ಅಂಚಿನಲ್ಲಿ ಅಲಾಸ್ಕ)
“ಜಗತ್ತಿನಲ್ಲಿ ಯಾವುದೂ ಜಡವಲ್ಲ” – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡ ಸಾಹಿತ್ಯ-ಸಂಸ್ಕೃತಿ ಚಿಂತನೆಯ ಹೊಸದಿಗಂತಗಳ ಬಾಗಿಲುಗಳನ್ನು ತೆರೆಸಿದ ಲೇಖಕ. ಕ್ರಿಯಾಶೀಲತೆ ಮತ್ತು ಚಲನಶೀಲತೆ ಅವರ ಸಾಹಿತ್ಯದ ಕೆಲವು ಆಶಯ. ವ್ಯಕ್ತಿ ವಿಶಿಷ್ಠ ಸಿದ್ಧಾಂತದಿಂದ ಜೀವಕೇಂದ್ರಿತ ಜಗತ್ತಿನ ಶೋಧದ ಕಡೆಗೆ ಅವರ ಸಾಹಿತ್ಯ ವಿಕಾಸವಾಗುತ್ತಾ ಬೆಳೆಯುತ್ತದೆ. ತಮ್ಮ ಜೀವನಾನುಭವಗಳನ್ನೇ ಕಥನಗಳನ್ನಾಗಿಸಿ, ಅದಕ್ಕೆ ಹೊಸ ವೈಚಾರಿಕತೆ, ದಾರ್ಶನಿಕತೆ ಹಾಗೂ ವುಜ್ವಲ ಕಾಂತಿಯನ್ನು ದೊರಕಿಸಿಕೊಟ್ಟ ಕನ್ನಡದ ಅಪರೂಪದ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರು.
ಅವರ ಬದುಕು ಸರಳ ಹಾಗೂ ನೇರ ವ್ಯಕ್ತಿತ್ವದಿಂದ ಕೂಡಿದ್ದಾಗಿತ್ತು. ಹಾಗಾಗಿಯೇ ತೇಜಸ್ವಿ ಅವರ ಬರಹ, ಆಸಕ್ತಿ, ಅವರ ಬದುಕಿನ ರೀತಿ, ಬದುಕಿನ ಬಗೆಗೆ ಮನಸೋತು; ಆಕರ್ಶಿತರಾಗಿ; ಅವರಂತೆ ಬದುಕಬೇಕು; ಎಂದು ಹಂಬಲಿಸುವವರು ಅಸಂಖ್ಯ.
ಇಪ್ಪತ್ತನೇ ಶತಮಾನದ ಅತ್ಯಂತ ಯಶಸ್ವಿ ಹಾಗೂ ಪ್ರಭಾವಿ ಲೇಖಕರಲ್ಲಿ ಒಬ್ಬರಾಗಿದ್ದ ತೇಜಸ್ವಿ ಬದುಕ್ಕಿದ್ದು ಕೇವಲ ಅರವತ್ತೊಂಭತ್ತು (69) ವರ್ಷ್ ಗಳು ಮಾತ್ರ [1938-2007]. ಅವರ ಸಾವು ಅಸಂಖ್ಯ ಸಾಹಿತ್ಯ ಪೇಮಿಗಳನ್ನು ಕೊರಗಿನಲ್ಲಿಟ್ಟಿದೆ. ಆದರೆ ಅವರ ಬದುಕು, ಸಾಹಿತ್ಯ ಕೃಷಿ ನಿರಂತರವಾಗಿ ನಮ್ಮ ಬದುಕಿನ ಭಾಗವಾಗುತ್ತಿದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಅಭಿವ್ಯಕ್ತಿ ವಿಧಾನ, ಸ್ವರೂಪ, ಕಥನ ಕ್ರಮ, ಭಾಷೆಯ ಬಳಕೆ, ಹೊಸ ನುಡಿಗಟ್ಟುಗಳ ಶೋಧ; ತಮ್ಮ ಎಲ್ಲ ಬರಹಗಳಲ್ಲಿ ನಿರಂತರವಾಗಿ ಅನ್ವೇಷಣೆಗೆ ಒಳಪಟ್ಟಿದ್ದವು ಎಂಬುದಕ್ಕೆ ಅವರ ಅಗಾಧ ಸಾಹಿತ್ಯ ಕೃತಿಗಳೇ ಸಾಕ್ಷಿಯಾಗಿವೆ. ಅನುವಾದ, ಚಿತ್ರಕಲೆ, ಫೋಟೋಗ್ರಫಿ, ಸಿತಾರ್ ವಾದನ, ಸಂಗೀತ, ಮೀನು ಶಿಕಾರಿ, ಬೇಟೆ, ಪಕ್ಷಿ ವೀಕ್ಷಣೆ, ಕೃಷಿ, ಯಂತ್ರ ರಿಪೇರಿ, ಚಾರಣ, ಕಂಪ್ಯೂಟರ್ ಬಳಕೆ ಹಾಗೂ ಅದರಿಂದ ಪುಸ್ತಕ ಪಬ್ಲಿಷಿಂಗ್, ಅಡುಗೆ... ಹೀಗೆ ಹತ್ತು-ಹಲವು ಅವರ ಆಸಕ್ತಿ, ಅಭಿರುಚಿಗಳಾಗಿದ್ದವು. ಹಾಗಾಗಿ “ತೇಜಸ್ವಿ” ಎಂದರೆ ಒಂದು ವಿಸ್ಮಯ, ನಿಗೂಢ, ಮಾಯಾಲೋಕ!
* * *
ಸ್ವತಃ ಕಾಫಿ ಬೆಳೆಗಾರರಾದ ಪ್ರದೀಪ್ ಕೆಂಜಿಗೆ ಅಮೇರಿಕದ ಪ್ರಸಿದ್ಧ ವಿಶ್ವವಿಧ್ಯಾಲಯ ಟಸ್ಕೆಗಿಯಿಂದ ಪರಿಸರ ವಿಜ್ಞಾನ ಸ್ನಾತಕೋತ್ತರ ಪದವಿ ಹೊಂದಿರುವರು. ಅರಿಜೋನಾದ ಮರಳುಗಾಡಿನಲ್ಲಿ ಬುಡಕಟ್ಟು ಜನಾಂಗದವರೊಡನೆ ಕೆಲಸ ಮಾಡಿದ ಅನುಭವ ಅವರಿಗಿದೆ.
ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆ ಹಾಗೂ ಅದರ ಮೇಲೆ ಕ್ರಿಮಿನಾಶಕಗಳ ದುಷ್ಪರಿಣಾಮಗಳ ಅಧ್ಯಯನದಲ್ಲಿ ಪಿ.ಎಚ್.ಡಿ ದೊರಕಿಸಿಕೊಂಡಿದ್ದಾರೆ. ಪ್ರಸ್ತುತ ಕೆಫೆ ಕಾಫಿ ಡೇಯಲ್ಲಿ ರಿಸರ್ಚ ಮತ್ತು ಡೆವೆಲಪ್ಮೆಂಟ್ ಮುಖ್ಯ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿಸ್ಮಯ ಮಾಲಿಕೆಗಾಗಿ ಪೂರ್ಣಚಂದ್ರ ತೇಜಸ್ವಿಯವರೊಂದಿಗೆ ಜಂಟಿಯಾಗಿ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರವನ್ನೂ ಪಡೆದಿದ್ದಾರೆ.