ಈ ಪುಸ್ತಕದಲ್ಲಿ ವಿಷಯವಾಗಿರುವವರು ಐಶ್ವರ್ಯದಲ್ಲಾಗಲಿ ಪಾಂಡಿತ್ಯದಲ್ಲಾಗಲಿ ಉನ್ನತರಾದವರಲ್ಲಿ; ಬಹುಶಃ ಎಲ್ಲರೂ ಸಾಮಾನ್ಯ ವರ್ಗಕ್ಕೆ ಸೇರಿದವರು; ಆದರೆ ಸಮಾಜದಲ್ಲಿ ನೆಮ್ಮದಿಯನ್ನೂ ಒಳ್ಳೆಯತನವನ್ನೂ ಹರಡುತ್ತಿದ್ದವರು. ನಮ್ಮಲ್ಲಿ ಒಳ್ಳೆಯವರೆಂಬವರು - ಸಾಧು ಸತ್ಪುರುಷರು - ಸಾಮಾನ್ಯವಾಗಿ ಆಡಂಬರದ ಜನವಲ್ಲ. ಎಲ್ಲರಂತೆಯೇ ಇರುತ್ತಾರೆ. ಸಾಧು ಸಜ್ಜನರು ಈ ಅಂತರಾಳದ ನಾಳಗಳಂತೆ. ಅವು ಕಣ್ಣಿಗೆ ಕಾಣಿಸುವುದಿಲ್ಲ ; ಅವುಗಳ ಹರಿವಿನಲ್ಲಿ ಒಂದು ರಭಸವಿರುವುದಿಲ್ಲ. ಎಲ್ಲವೂ ಮಂದವಾಗಿ ಶಾಂತವಾಗಿರುತ್ತದೆ. ನೀರು ತೊಟ್ಟುತೊಟ್ಟಾಗಿ, ಕೊಂಚಕೊಂಚವಾಗಿ ಸ್ರವಿಸುತ್ತದೆ. ನೆಮ್ಮದಿ ಒಳ್ಳೆಯತನ - ಇವೂ ಹಾಗೆ. ಗಾಳಿಗೆ ಬೀಸುತ್ತಿರುವುದು, ನೀರಿಗೆ ಹರಿಯುತ್ತಿರುವುದು, ಬಿಸಿಯನ್ನಾರಿಸುವುದು, ನೈಜವಾಗಿರುವಂತೆ ಪರಸ್ಪರ ಸಹಾಯವೂ ಮನುಷ್ಯರಿಗೆ ನೈಜವಾಗಿರುವ ಒಂದು ಸಂಗತಿಯಾಗಿ ನಡೆಯುತ್ತದೆ. ಈ ಸಾಮಾನ್ಯ ಜನವರ್ಗ ಅಂಥದು. ನೆಲದ ಅಂತರಾಳದ ಊಟೆ-ಚಿಲುಮೆಗಳು ಹೇಗೋ ಮನುಷ್ಯ ಸಮಾಜದಲ್ಲೂ ಸಾಮಾನ್ಯ ಜನವರ್ಗದವರ ಒಳ್ಳೆಯತನ, ಸ್ನೇಹ, ಸೌಹಾರ್ದಗಳು ಸಮಾಜಕ್ಕೆ ಹಾಗೆ. ಹೀಗೆ ಬಾಳಿದ ಕೆಲವರನ್ನು ಕುರಿತು ನೆನಪುಗಳನ್ನು ಈ ಪುಟಗಳಲ್ಲಿ ಚಿತ್ರಿಸಿದೆ. ಪ್ರೀತಿಯೇ ಸೌಂದರ್ಯ, ಪ್ರೀತಿ ಸಾಲದ ದೇಶದಲ್ಲಿ ಆಭರಣ ಅಲಂಕಾರ ಐಶ್ವರ್ಯಗಳು ಬರಿಯ ಭಾರ. ಪ್ರೀತಿಯೇ ಐಶ್ವರ್ಯ. ಪ್ರೀತಿಯೆಂದರೆ ಹೃದಯ ವಿಕಾಸ - ಇದೇ ಶ್ರೀ ಡಿ.ವಿ.ಜಿ.ಯವರ ಜೀವನದ ಸಂದೇಶವೆಂದು ಇಟ್ಟುಕೊಳ್ಳಬಹುದಾಗಿದೆ.