ರಾಮಾಯಣದಲ್ಲಿ ಬರುವ ಅಹಲ್ಯೋದ್ಧಾರ, ವಾಲಿಯ ವಧೆ, ಸೀತಾಪರಿತ್ಯಾಗ ಮೊದಲಾದ ಜಟಿಲ ಸಮಸ್ಯೆಗಳನ್ನು ಡಿ. ವಿ. ಜಿ ಅವರು ಆರಿಸಿಕೊಂಡು. ಈ ಸಣ್ಣ ಕಾವ್ಯದಲ್ಲಿ ಶ್ರೀರಾಮನ ಸತ್ತ್ವಪರೀಕ್ಷಣವನ್ನು ನಮ್ಮ ಮುಂದಿಟ್ಟಿದ್ದಾರೆ. ಶ್ರೀರಾಮನಲ್ಲಿ ನಾವು ನೋಡಬೇಕಾದುದು ಕೇವಲ ಶೃಂಗಾರ ವೀರರಸಗಳನ್ನು ಮಾತ್ರವಲ್ಲ ; ಅವಕ್ಕಿಂತ ಹೆಚ್ಚಾಗಿ ಶಾಂತಿರಸವನ್ನು ನೋಡಬೇಕು. ಆತನ ಮನಸ್ಸು ಹೇಗೆ ಪರಿಪಾಕಕ್ಕೆ ಬಂದಿತು, ಆ ಆತ್ಮ ಹೇಗೆ ಸಂಸ್ಕಾರವನ್ನು ಪಡೆಯಿತು, ಅದರ ಫಲವಾಗಿ ಪರಮಾರ್ಥ ಆತನಿಗೆ ಹೇಗೆ ಕಂಡು ಬಂದಿತು–ಎಂಬಿವುಗಳನ್ನು ಚಿತ್ರಿಸುವುದು (ಕಾವ್ಯಕ್ಕೆ ಒಂದು ಉದ್ದೇಶವಿರುವುದಾದರೆ) ಡಿ. ವಿ. ಜಿ. ಅವರ ಉದ್ದೇಶವೆಂದು ಹೇಳಬೇಕಾಗಿದೆ. ಲಾಕ್ಷಣಿಕರು ಶೃಂಗಾರ ವೀರರಸಗಳನ್ನೂ ಕರುಣರಸವನ್ನೂ ಕಾವ್ಯರಸಗಳನ್ನಾಗಿ ಗಣಿಸಿದಂತೆ ಶಾಂತಿರಸವನ್ನೂ ಗಣಿಸಿದ್ದಾರೆ. ಜೀವನವನ್ನು ಖಂಡದೃಷ್ಟಿಯಿಂದ ನೋಡುವವರು ಕೇವಲ ಶೃಂಗಾರ ಲಾಲಸೆಯ, ಪ್ರಲಾಪದ, ಆಕ್ರೋಶಗಳ ಸ್ವರಗಳನ್ನು ಮಾತ್ರ ನುಡಿಸಬಹುದು. ಜೀವನವನ್ನು ಸಮಗ್ರ ದೃಷ್ಟಿಯಿಂದ ನೋಡುವವರು ಅದರಲ್ಲಿ ಆಲೋಚನೆ, ವಿವೇಚನೆ, ಧ್ಯಾನ, ಉಪಶಮನ, ತತ್ತ್ವಗ್ರಹಣ–ಈ ಸ್ವರಗಳಿರುವುದನ್ನೂ ತಿಳಿಯುವರು; ಮತ್ತು ಕಾವ್ಯದಿಂದಲೂ ಆತ್ಮೋದ್ಧಾರವುಂಟೆಂಬುದನ್ನು ಜಗತ್ತಿಗೆ ತೋರಿಸುವರು. ಮನಸ್ಸಿನ ಚಲನೆ, ಉದ್ವೇಗ, ಚಿಂತೆ, ವಿಚಾರ, ತತ್ತ್ವದರ್ಶನ, ಚಿತ್ತಸಮಾಧಾನ, ಶಾಂತಿ-ಇವು ಮನುಷ್ಯನಲ್ಲಾಗುವ ರಸಪರಿಪಾಕದ ಕ್ರಮ. ಶ್ರೀರಾಮನು ಪುರಾಣಪುರುಷನಾದರೂ ಮನುಷ್ಯಲೋಕದಿಂದ ಹೊರಗಿರುವವನಲ್ಲ. ಅತನು ಕೂಡ ವಿಚಾರಮಾಡಿದ್ದಾನೆ. ಸಾಧನೆ ಮಾಡಿದ್ದಾನೆ, ಮತ್ತು ಕತ್ತಲೆಯಿಂದ ಬೆಳಕಿಗೆ ಬಂದಿದ್ದಾನೆ. ಅಹಲ್ಯೆ, ವಾಲಿ, ಸೀತೆ ಮೊದಲಾದ ಪಾತ್ರಗಳು ಶ್ರೀರಾಮನು ನಡಸಿದ ಸಾಧನೆಯಲ್ಲಿ ಕ್ರಮಶಃ ಬರುವ ಮೆಟ್ಟಲುಗಳು. ಪಾಪವೃತ್ತಾಂತದಿಂದ ಮನಃಪರಿತಾಪ; ಆತ್ಮತಾಪದಿಂದ ಧರ್ಮವಿಚಾರಕುತೂಹಲ ; ಈ ವಿಚಾರಕುತೂಹಲದಿಂದ ಮಾನವ ಸ್ವಭಾವಪರಾಮರ್ಶೆ ; ಅದರಿಂದ ಸೃಷ್ಟಿತತ್ತ್ವಚಿಂತನೆ, ವಿಶ್ವಸಹಾನುಭೂತಿ, ವಿಶ್ವವ್ಯಾಪಕ ದೃಷ್ಟಿ, ಪರತತ್ತ್ವದರ್ಶನ, ಪರಮಶಾಂತಿ–ಇವು ಹೇಗೆ ಕ್ರಮಕ್ರಮವಾಗಿ ಶ್ರೀರಾಮನಲ್ಲಿ ನೆಲೆಗೊಂಡವೆಂಬುದನ್ನೂ, ಸಂಕ್ಷೋಭೆಯಿಂದ ಸ್ವಸ್ಥಭಾವಕ್ಕೆ ಆ ಉತ್ತಮಜೀವ ಹೇಗೆ ಯಾತ್ರೆ ನಡಸಿತೆಂಬುದನ್ನೂ ಡಿ. ವಿ. ಜಿ. ಅವರು ನಮ್ಮ ಮುಂದಿಟ್ಟಿದ್ದಾರೆ; ಈ ಆತ್ಮ ಸಂಸ್ಕಾರದ ಚಿತ್ರವನ್ನು ಸುಲಭವಾಗಿ ನಾವು ಗ್ರಹಿಸುವಂತೆ ಆಯಾ ಪಾತ್ರಗಳನ್ನು ತಂದುಕೊಂಡು. ಅವರವರ ಬಾಯಿಂದಲೇ ಅವರವರ ಮನೋಭಾವಗಳನ್ನೂ ವಾದಗಳನ್ನೂ ಹೇಳಿಸಿ, ನಾಟಕದ ದಿವ್ಯಕಳೆಯನ್ನು ಈ ಕಾವ್ಯಕ್ಕೆ ಕೊಟ್ಟಿದ್ದಾರೆ. ರಸಜ್ಞರಿಗೆ ಕಾವ್ಯಾಮೃತ, ಲೌಕಿಕರಿಗೆ ಧರ್ಮಸೂಕ್ಷ್ಮಗಳ ಮತ್ತು ಜೀವನರಹಸ್ಯಗಳ ಬೋಧೆ, ಮುಮುಕ್ಷುಗಳಿಗೆ ಅಧ್ಯಾತ್ಮಜ್ಞಾನ–ಈ ಮೂರು ಈ ಸಣ್ಣ ಕಾವ್ಯದಲ್ಲಿ ದೊರೆಯುವುದರಿಂದ ನಮ್ಮ ಜೀವನ ಯಾತ್ರೆಯೂ ಸಹ ಕ್ರಮವಾಗಿ ಈ ಮೆಟ್ಟಲುಗಳನ್ನು ಹತ್ತಿ ಕಡೆಗೆ ಮೌನಗಂಭೀರದ ನಿತ್ಯಶಾಂತಿಯಲ್ಲಿ ಪರಿಣಾಮಕಾರಿಯಾಗಲೆಂದು ಡಿ. ವಿ. ಜಿ. ಅವರು ಹಾರೈಸುತ್ತಾರೆಂದು ತೋರುತ್ತದೆ. ಶೈಲಿಯ ವಿಷಯದಲ್ಲಿ ಒಂದು ಮಾತು. ಡಿ. ವಿ. ಜಿ. ಅವರು ಹಳೆಗನ್ನಡ ಮತ್ತು ಹೊಸಕನ್ನಡ ಶೈಲಿಗಳೆರಡರಲ್ಲಿಯೂ ನುರಿತ ಕೈ. ಅವರ ಕಂದಗಳನ್ನೂ ವೃತ್ತಗಳನ್ನೂ ಓದುವಾಗ ಪಂಪ ರನ್ನರನ್ನು ಓದುತ್ತಿರುವಂತೆ ಭಾಸವಾಗುತ್ತದೆ. ಈಗಿನ ಹೊಸ ಛಂದಸ್ಸುಗಳ, ಭಾವಗೀತಗಳ, ಸರಳ ರಗಳೆಗಳ ಪರಿಸರಣದಲ್ಲಿ ಆ ಹಿಂದಿನ ಶೈಲಿ ಧೀರಗಂಭೀರ ವಾತಾವರಣವನ್ನು ತಂದಿರುತ್ತದೆ. ಅವರ ದ್ವಿಪದಿಗಳೂ ಸೀಸಪದ್ಯಗಳೂ ಆಧುನಿಕ ಸಾಹಿತ್ಯದ ಮೇಲ್ಮಟ್ಟವನ್ನು ಮುಟ್ಟಿರುತ್ತವೆ. ಡಿ. ಇ. ಜಿ. ಅವರು ಪೂರ್ವಿಕರೂ ಅಹುದು, ಆಧುನಿಕರೂ ಅಹುದು ಎಂಬುದನ್ನು ಈ ಸಣ್ಣ ಕಾವ್ಯ ಚೆನ್ನಾಗಿ ತೋರಿಸಿಕೊಡುತ್ತದೆ.