About the author
ನಂದಕುಮಾರ್ ಕೆ. ಎನ್. ಇವರ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸೋಮಲಾಪುರ ಎಂಬ ಮಲೆನಾಡಿನ ಹಳ್ಳಿಯ ಕುಂಬ್ರಿಉಬ್ಬು ಎಂಬ ಸ್ಥಳ. ಕಾಲೇಜು ಪದವಿ ಶಿಕ್ಷಣ ಮುಗಿಯವ ಹಂತದಲ್ಲಿಯೇ ಸಾಮಾಜಿಕ ಚಳವಳಿಯಲ್ಲಿ ತೊಡಗಿದವರು. ಪತ್ರಕರ್ತರಾಗಿ ಕೆಲಸ ಮಾಡಿದವರು. 1988-89ರಿಂದ ನಾಡಿನ ಪ್ರಮುಖ ಚಳವಳಿಗಳಲ್ಲಿ ನೇರವಾಗಿ ಇಳಿದು ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಾ ಬಂದವರು.. ಪರಿಸರ, ಕನ್ನಡ ರಾಷ್ಟ್ರೀಯತೆ, ವಿದ್ಯಾರ್ಥಿ, ರೈತ, ದಲಿತ,, ಆದಿವಾಸಿ, ಮಹಿಳಾ, ಹೀಗೆ ಹಲವು ಚಳವಳಿಗಳ ನಾಯಕತ್ವದಲ್ಲಿ ಒಬ್ಬರಾಗಿದ್ದವರು. ಕೊಪ್ಪದ ಗುಬ್ಬಗದ್ದೆ ಎಂಬಲ್ಲಿ ಕಾಡು ಉಳಿಸಲು ನಡೆದ ಹೋರಾಟ, ವಿದ್ಯಾರ್ಥಿಗಳ ಫೀ ಹೆಚ್ಚಳದ ವಿರುದ್ಧ, ಹಾಸ್ಟೆಲ್ ಇನ್ನಿತರ ಸೌಲಭ್ಯಗಳಿಗಾಗಿನ ಹೋರಾಟ, ಕಾವೇರಿ ನದಿನೀರಿನ ಹಂಚಿಕೆಯ ಒಡೆದಾಳುವ ಕುತಂತ್ರಗಳನ್ನು ಬಯಲಿಗೆಳೆದು ನಡೆದ ಹೋರಾಟ, ತುಂಗಾ ನದಿ ಮೂಲದ ಉಳಿವಿಗಾಗಿನ ಹೋರಾಟ, ಪಶ್ಚಿಮ ಘಟ್ಟಕ್ಕೆ ಮಾರಕವಾಗಿದ್ದ ಗಣಿಗಾರಿಕೆ ವಿರುದ್ಧದ ಹೋರಾಟ, ಬೀದರಿನ ಕೊಳಾರ ಕೈಗಾರಿಕಾ ಮಾಲಿನ್ಯ ವಿರೋಧೀ ಹೋರಾಟ, ರಾಯಚೂರಿನ ರೈತ ಕೂಲಿಗಳ ಹೋರಾಟ, ಕುದುರೆಮುಖ ರಾಷ್ಟ್ರೀಯ ಉದ್ಯಾನದ ಹೆಸರಿನಲ್ಲಿ ಅಲ್ಲಿನ ಅದಿವಾಸಿಗಳೂ ಸೇರಿದಂತೆ ಜನರನ್ನೆಲ್ಲಾ ಒಕ್ಕಲೆಬ್ಬಿಸುವುದರ ವಿರುದ್ಧದ ಹೋರಾಟಗಳಲ್ಲಿ ನೇರವಾಗಿ ಭಾಗವಹಿಸಿದವರು. ಸುಮಾರು ಮೂರು ದಶಕಗಳಿಂದ ಸಾಮಾಜಿಕ ಚಳವಳಿಯ ಭಾಗವಾಗಿರುವವರು.
ಈ ಕಾರಣಕ್ಕಾಗಿಯೇ ಸರಕಾರ ಇವರನ್ನು ಮಾವೋವಾದಿಯೆಂದು 2010ರಲ್ಲಿ ಬಂಧಿಸಿ ಹತ್ತಾರು ಪ್ರಕರಣಗಳನ್ನು ರಾಜ್ಯದ ವಿವಿದೆಡೆ ದಾಖಲಿಸಿ ಸೆರಮನೆಯಲ್ಲಿ ಇಟ್ಟಿತ್ತು. ನ್ಯಾಯಾಲಯಗಳಿಂದ ಎಲ್ಲಾ ಪ್ರಕರಣಗಳಲ್ಲಿ ಖುಲಾಸೆಯಾಗಿ ಏಳು ವರ್ಷಗಳ ಕಾಲ ವಿಚಾರಣೆಯ ಹೆಸರಿನ ಸೆರೆವಾಸ ಮುಗಿದು ಬಿಡುಗಡೆಯಾಗಿ ಬಂದು ಈಗ ಒಂದು ವರ್ಷ ಮುಗಿದಿದೆ. ಮುಂಜಾವು, ಜನವಿಮುಕ್ತಿ, ಸಂವಾದ, ವಾರ್ತಾಭಾರತಿ , ಗೌರಿಲಂಕೇಶ್, ಸಾಕೇತ್, ಬಾರುಕೋಲು ಪತ್ರಿಕೆಗಳಲ್ಲಿ ಹಾಗೂ ಸಮಾಚಾರ.ಕಾಮ್ ವೆಬ್ ಪೋರ್ಟಲ್ ನಲ್ಲಿ ಇವರು ಬರೆದ ಸಾಮಾಜಿಕ, ಆರ್ಥಿಕ, ರಾಜಕೀಯ ಲೇಖನಗಳು, ವರದಿಗಳು, ಕವನಗಳು ಪ್ರಕಟವಾಗಿವೆ.