ಇಂಡಿಯ ದೇಶದಲ್ಲಿ ವಿಗ್ರಹಶಿಲ್ಪಕ್ಕೆ ಹೆಸರಾಗಿರುವ ದೇವಲಯಗಳಲ್ಲಿ ಬೇಲೂರಿನದು ಮೊದಲಪಂಕ್ತಿಯದು,—ಮೊದಲನೆಯದು ಎಂದೂ ಹೇಳಬಹುದು. ಬೇಲೂರು ನಮ್ಮ ದೇಶದ ಪೂರ್ವಚರಿತ್ರೆಯಲ್ಲಿ ಅತ್ಯಂತ ಸ್ಮರಣೀಯವಾದ ಪಟ್ಟಣಗಳ ಪೈಕಿ ಒಂದು. ಅದು ಕೆಲವು ಶತಮಾನಕಾಲ ಹೊಯ್ಸಳರ ರಾಜಧಾನಿಯಾಗಿತ್ತು. ಹೊಯ್ಸಳ ರಾಜರುಗಳಲ್ಲಿ ಅತ್ಯಂತ ಪ್ರಸಿದ್ಧನಾದವನು ವಿಷ್ಣುವರ್ಧನ. ಆತ ಬಹು ಪರಾಕ್ರಮಶಾಲಿ; ತನ್ನ ರಾಜ್ಯವನ್ನು ಎಲ್ಲ ದಿಕ್ಕುಗಳಲ್ಲಿಯೂ ವಿಸ್ತರಿಸಿದ್ದವನು. ರಣರಂಗದಲ್ಲಿ ಆತನು ಹೇಗೆ ಜಯಶಾಲಿಯಾದವನೋ ರಾಜ್ಯಪಾಲನೆಯಲ್ಲಿಯೂ ಹಾಗೆ ಕೃತಸಂಕಲ್ಪನಾದವನು. ತಾನು ಸರಸ ಕಲಾಪ್ರಿಯನಾಗಿ, ತನ್ನ ಜನ ನಗುಮುಖದಿಂದ ನಲಿಯುವುದನ್ನು ನೋಡಬೇಕೆಂದು ಪರಿಶ್ರಮಿಸುತ್ತಿದ್ದವನು. ವಿಷ್ಣುವರ್ಧನನು ಕಟ್ಟಿಸಿದ ದೇವಾಲಯಗಳಲ್ಲಿ ಐದು ನಾರಾಯಣ ದೇವಾಂಕಿತವೆಂದು ಲೋಕದ ಹೇಳಿಕೆ. ಇವುಗಳಲ್ಲಿ ಐದನೆಯದು ಬೇಲೂರಿನ ದೇವರ ಹೆಸರು. ಅದೇ ದೇವರಿಗೆ ಸೌಮ್ಯನಾರಾಯಣನೆಂದೂ ಚೆನ್ನಕೇಶವನೆಂದೂ ಹೆಸರುಗಳು ರೂಢಿಯಾಗಿವೆ. ಈ ದೇವಸ್ಥಾನದ ಮುಖ್ಯ ವೈಶಿಷ್ಟ್ಯ ಅದರ ವಿಗ್ರಹಶಿಲ್ಪವೆಂದು ಮೊದಲೇ ಸೂಚಿಸಿದ್ದಾಗಿದೆ. ಶಿಲ್ಪದಲ್ಲಿ ವಾಸ್ತುಶಿಲ್ಪ, ವಿಗ್ರಹಶಿಲ್ಪ, ಯಂತ್ರಶಿಲ್ಪ ಮೊದಲಾದ ಅನೇಕ ವಿಭಾಗಗಳುಂಟಷ್ಟೆ ? ಅವುಗಳಲ್ಲಿ ವಾಸಗೃಹದ ನಿರ್ಮಾಣಕ್ಕೆ ಸಂಬಂಧಪಟ್ಟದ್ದು ವಾಸ್ತುಶಿಲ್ಪ (ಆರ್ಕಿಟೆಕ್ಚರ್), ಇದರಲ್ಲಿ ಕಲಾಂಶಕ್ಕಿಂತ ಉಪಯೋಗಾಂಶ ಹೆಚ್ಚಿನದು. ಕಲೆಯೆಂದರೆ ಸೌಂದರ್ಯ ಕಲ್ಪನೆ. ಈ ಕಟ್ಟಡದ ಸೊಬಗು ಇಷ್ಟಿದ್ದರೂ ಅದರ ವಿಶೇಷವಾದ ಆಕರ್ಷಣೆ ಅದರ ಪ್ರತಿಮೆಗಳದು. ಆ ಚಿತ್ರಸೌಂದರ್ಯವನ್ನು ಬರಿಯ ಮಾತುಗಳ ಮೂಲಕ ಕಾಣಿಸಲಾದೀತೆಂದಾಗಲಿ ಕಂಡುಕೊಳ್ಳಬಹುದೆಂದಾಗಲಿ ಯಾರಾದರೂ ಭಾವಿಸಿದ್ದರೆ ಅವರು ಭ್ರಾಂತರು. ಪ್ರತ್ಯಕ್ಷ ದರ್ಶನದಿಂದ ಸಾಧ್ಯವಾದ ಅನುಭವವು ವಾಙ್ಮಯ ವರ್ಣನೆಗೆ ಸಾಧ್ಯವಾಗುವ ಹಾಗಿದ್ದರೆ, ಆ ದೃಶ್ಯದಲ್ಲಿ ಅತಿಶಯದ ಸಂಗತಿಯೇನೂ ಇರದೆಂದೇ ಅರ್ಥ. ಯಥಾವತ್ತಾದ (ಫೋಟೋಗ್ರಾಫ್) ಛಾಯಾಬಿಂಬದಿಂದ ಸಹ ದೊರೆಯತಕ್ಕದ್ದಲ್ಲ ಆ ಸೌಂದರ್ಯಾನುಭವ. ಹೀಗಿದ್ದರೂ ಈ ಉಪನ್ಯಾಸದ ಉದ್ದೇಶ ನೆರವೇರಬೇಕಾದರೆ ವರ್ಣನೆಯ ಪ್ರಯತ್ನ ನನ್ನಿಂದ ಒಂದಷ್ಟು ಆಗಬೇಕಾಗಿದೆ.