ಮನಸ್ಸು ತಾನೇ ಸ್ವತಂತ್ರವಾಗಿ ಮಾಡುವ ಕಾರ್ಯ ‘ಋತ’. ಆಮೇಲೆ ಅದನ್ನು ಇತರರ ಹೇಳಿಕೆ ದೃಢಪಡಿಸುತ್ತದೆ. ಈ ಸಮರ್ಥನ ಪ್ರಮಾಣಗಳು ಸತ್ಯ. ಎಂದರೇನಾಯಿತು? ಋತವೂ ಸತ್ಯವೂ ಒಟ್ಟುಗೂಡಿದರೆ ನಂಬಿಕೆ ಸ್ಥಿರವಾಯಿತು. ನಡವಳಿಕೆ ನಿಶ್ಚಿತವಾಯಿತು. ಋತವೆಂದರೆ ನೈಜಪ್ರವೃತ್ತಿ, ಸ್ವತಂತ್ರವಾದ ನಡವಳಿಕೆ, ಸ್ವಭಾವಾಭಿವ್ಯಕ್ತಿ. ‘ಋ’ ಎಂಬುದು ಗತಿ ಎಂಬರ್ಥದಲ್ಲಿ; ಗತಿ ಎಂದರೆ ಚಲನೆ. ಮನುಷ್ಯನ ಬದುಕಿನಲ್ಲಿ ದಿನದಿನವೂ ಹೊಸ ಹೊಸ ಸಂದರ್ಭಗಳೂ ಹೊಸ ಹೊಸ ಸನ್ನಿವೇಶಗಳೂ ಬರುತ್ತಿರುವವಷ್ಟೆ. ಅವು ಹೊಸ ಹೊಸ ಪ್ರಶ್ನೆಗಳನ್ನು ಎಬ್ಬಿಸುತ್ತವೆ. ಅಂಥ ಒಂದು ಹೊಸ ಪ್ರಶ್ನೆ ಅಥವಾ ಹೊಸ ಸಂದರ್ಭವೆದ್ದಾಗ ಮನುಷ್ಯನು ಮೊದಲು ತನ್ನ ಮನಸ್ಸಿನ ಒಳಗಡೆ ತಾನಾಗಿ ಹೇಗೆ ಉತ್ತರ ಕೊಡುತ್ತಾನೆ? ಇತರರ ಪ್ರೇರಣೆಯಿಲ್ಲದೆ, ಅನ್ಯಪ್ರಭಾವವಿಲ್ಲದೆ, ತಾನೂ ಯೋಚನೆ ಮಾಡದೆ, ತರ್ಕಿಸದೆ, ತಕ್ಷಣ ಏನು ಜವಾಬು ಕೊಡುತ್ತಾನೆ? ಈ ಮೂಲ ಪ್ರತಿಕ್ರಿಯೆಯೇ ಅವನ ‘ಋತ’. ಹೀಗೆ ಅವನು ತಾನಾಗಿ ತನಗೆ ಕೊಟ್ಟುಕೊಂಡ ಉತ್ತರವನ್ನು ಆ ಬಳಿಕ ಇತರರು ತನಗೆ ಕೊಟ್ಟ ತಿಳಿವಳಿಕೆ ಸಲಹೆಗಳೊಡನೆ ಹೋಲಿಸಿ ನೋಡಿ, ತನ್ನ ಹೊರಗಿನ, ಅನ್ಯರು ಹೇಳುವ ವರದಿಗೂ ತನ್ನೊಳಗಿನ ಋತಕ್ಕೂ ಹೊಂದಾವಣೆಯನ್ನು ಮಾಡಿಕೊಂಡು ತಯಾರು ಮಾಡುವ ನಿಶ್ಚಯವೇ ‘ಸತ್ಯ’. ಸತ್ಯವು ನಮ್ಮ ಜೀವನಕ್ಕೆ ಬೇಕಾಗಿರುವ ಜ್ಞಾನ ಸಂಪತ್ತಿನಲ್ಲಿ ಪ್ರಥಮಾಂಶ. ಋತ ಸತ್ಯಕ್ಕೆ ಆದಿ. ಋತದ ವಾಗ್ರೂಪ ಸತ್ಯ; ಸತ್ಯದ ಕ್ರಿಯಾರೂಪ ಧರ್ಮ.