‘ತಿಲೋತ್ತಮೆ’ ನಾಟಕದ ಮೂಲ ಭಾಗ ಪ್ರಕಟವಾದದ್ದು ಕರ್ಣಾಟಕ ಸಾಹಿತ್ಯ ಪರಿಷತ್ಪತ್ರಿಕೆಯ ೧೯೨೧ರ ಏಪ್ರಿಲ್ ತಿಂಗಳ ಸಂಚಿಕೆಯಲ್ಲಿ : ಆಗ ಅದರ ಸಂಪಾದಕರಾಗಿದ್ದ ಕೀರ್ತಿಶೇಷ ಪ್ರೊ ॥ ಬೆಳ್ಳಾವೆ ವೆಂಕಟನಾರಣಪ್ಪನವರ ಪ್ರೇರಣೆ-ಪ್ರೋತ್ಸಾಹಗಳಿಂದ. ಅವರು ಅದನ್ನು ಮೆಚ್ಚಿಕೊಂಡಿದ್ದರೆಂದು ಸ್ವತಃ ವ್ಯಕ್ತವಾಗುತ್ತದೆ. ಅವರ ಮೆಚ್ಚಿಕೆ ನನಗೆ ಒಂದು ಭಾಗ್ಯ. ಆಗ ಪರಿಷತ್ತಿನ ಪಂಡಿತರಾಗಿದ್ದ ವೇ ॥ ತೋಗೆರೆ ನಂಜುಡಶಾಸ್ತ್ರಿಗಳು ಮತ್ತು ವೇ ॥ ಕಡಬದ ನಂಜುಂಡಶಾಸ್ತ್ರಿಗಳು ಇದನ್ನು ಒಪ್ಪಿಕೊಂಡಿದ್ದರು. ಇದು ನನಗೆ ಸಂತೋಷದ ವಿಷಯವೇ. ಇದಕ್ಕಿಂತ ಮುಖ್ಯವಾಗಿ, ಮಿತ್ರರಾದ ಟಿ.ಪಿ. ಕೈಲಾಸಂ ಅವರು ಈ ಕೃತಿಯಲ್ಲಿ ಏನೋ ಸ್ವಾರಸ್ಯವನ್ನು ಕಂಡು ಅದನ್ನು ಪದೇ ಪದೇ ಉದಾಹರಿಸುತ್ತಿದ್ದರು. ಹೀಗೆ ಇದಕ್ಕೊಂದು ಬೆಲೆ ಬಂತು. ಆದರೆ, ಈಗಿನ ಕಾಲದಲ್ಲಿ, ಬಹು ವರ್ಷ ಕಳೆದ ಬಳಿಕ—ಇಂದಿನ ನವನಾಗರಿಕ ಮಹನೀಯರಿಗೆ ಈ ಹಳೆಯ ಕಾಲದ್ದು ಎಷ್ಟು ಮಾತ್ರ ಹಿಡಿಸೀತೋ ಹೇಳಲಾರೆ. ಅಲ್ಲೊಬ್ಬರು ಇಲ್ಲೊಬ್ಬರಿಗೆ ಒಪ್ಪಿತವಾಗಬಹುದೋ ಏನೋ!