ಈ ನಾಟಕದ ಕಥೆ ಈಗ್ಗೆ (೧೯೪೧) ಆರುನೂರು ವರ್ಷಗಳಷ್ಟು ಹಳೆಯದು. ಅದು ಕಟ್ಟು ಕಥೆಯಲ್ಲ; ಚರಿತ್ರೆಯ ಆಧಾರವುಳ್ಳದ್ದು. ಮಾನವ ಪ್ರಪಂಚದಲ್ಲಿಯ ಯಾವ ಒಂದು ಪದಾರ್ಥದ ಅಥವಾ ವ್ಯಾಪಾರದ ಸ್ವರೂಪವನ್ನು ಚೆನ್ನಾಗಿ ತಿಳಿಯಬೇಕಾದರೂ ಅದನ್ನು ಎರಡು ಕಡೆಗಳಿಂದ ನೋಡಬೇಕು: (೧) ಹೊರಗಿನಿಂದ, (೨) ಒಳಗಿನಿಂದ. ಭರತಖಂಡದ ಪೂರ್ವಚರಿತ್ರೆಗೆ ಸಂಬಂಧಪಟ್ಟ ಮಹಾಸಮಾರಂಭಗಳ ವಿಷಯದಲ್ಲಿ ಇಂಥ ವಿವರಗಳನ್ನು ತಿಳಿದುಕೊಳ್ಳಲು ಸಾಧನಗಳು ಸಾಲವು. ವಿದ್ಯಾರಣ್ಯರಿಗಿದ್ದ ಅಂತರ್ಭಾವಗಳೆಂಥವು, ಅವರು ತಮ್ಮ ಶಿಷ್ಯರಿಗೆ ಮಾಡಿದ ಉಪದೇಶಗಳೆಂಥವು, ಹರಿಹರ ಬುಕ್ಕರು ಮಾಡಿದ ಆಲೋಚನೆಗಳೆಂಥವು, ಆ ಕಾಲದ ಜನರಿಗಿದ್ದ ಆಶೆ ಆಶಯಗಳೆಂಥವು—ಇವುಗಳನ್ನೆಲ್ಲ ತಿಳಿಸುವ ಪ್ರತ್ಯಕ್ಷ ಪ್ರಮಾಣಗಳಾವುವೂ ಇದುವರೆಗೆ ನಮಗೆ ದೊರೆತಿಲ್ಲ. ಈ ವಿವರಗಳನ್ನು ನಾವು ಅನುಮಾನಿಸಿ, ಅಥವಾ ಊಹಿಸಿ, ಮನಸ್ಸಿಗೆ ಗೋಚರಪಡಿಸಿಕೊಳ್ಳಬೇಕಾಗಿದೆ. ಈ ಪುಸ್ತಕವನ್ನು ಬರೆದಂದಿನಿಂದ ಇದುವರೆಗೆ (೧೯೪೧) ಆಗಿರುವ 20 - 24 ವರ್ಷಗಳೊಳಗೆ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಯುಗ ಬದಲಾಯಿಸಿದೆ. ಕಾವ್ಯ ನಾಟಕಗಳ ವಸ್ತು, ಪಾಕ, ಶೈಲಿ, ಧಾಟಿ—ಇವೆಲ್ಲವೂ ಹೊಸ ಹೊಸದಾಗುತ್ತಿವೆ. ಈ ನೂತನ ಕೃತಿಗಳ ನಡುವೆ ಹಳೆಯ ತೀರಿನ “ವಿದ್ಯಾರಣ್ಯ ವಿಜಯ”ವು ಈ ಕಾಲದ ಕಾಲೇಜು ವಿದ್ಯಾರ್ಥಿನಿಯರ ನಡುವೆ ಕುಳಿತ ಹಳೆಯಕಾಲದ ಮುತ್ತೈದೆಯನ್ನು ಹೋಲುತ್ತದೆ. ಜಾರ್ಜೆಟ್ ಸೀರೆಯ ಹೊಳಪು ನುಣುಪುಗಳು ದೊಮ್ಮಸಂದ್ರದ ಹಳೆ ಮಗ್ಗಕ್ಕೆ ಅಪರಿಚಿತವಾದುವು. ಲೋಲಕಿನ ಥಾಳಥಳ್ಯ ಬುಗಡಿಗೆ ಬರಲಾರದು. ಮುದಿ ಮುತ್ತೈದೆಯನ್ನು ಎಂದಾದರೊಂದು ದಿನ ಕರೆದು ಸೋಬಾನೆ ಹೇಳಿಸಬೇಕೆನ್ನುವವರು ಇನ್ನೂ ಇದ್ದಾರೆಂಬುದು ಈಗ ಆಕೆಗಿರುವ ಸಮಾಧಾನ; ತನಗೆ ನಾಜೂಕೇನೂ ತಿಳಿಯದೆಂಬುದು ಆಕೆಗಿರುವ ಸಂಕೋಚ. ಎರಡೂ ಇದ್ದುಕೊಳ್ಳಲಿ. (“ಮ್ಮೂಸಿಯಮ್” ಎನ್ನುವ) ಪ್ರಾಚೀನ ಕಲಾ ಪ್ರದರ್ಶನ ಶಾಲೆಯಲ್ಲಂತೂ ಆಕೆಯಂಥವರಿಗೆ ಒಂದು ಜಾಗವುಂಟು.