‘ದಿವಾನ್ ರಂಗಾಚಾರ್ಲು’ ತಕ್ಕಷ್ಟು ವಿಸ್ತಾರವಾಗಿ, ಹಳೆಯ ಮೈಸೂರು ರಾಜ್ಯವನ್ನು ಆಳಿದ ಹಿರಿಯರೊಬ್ಬರನ್ನು ಪರಿಚಯಿಸುತ್ತದೆ. ಅವರ ಬದುಕಿನ ಕೆಲವಾರು ಘಟನೆಗಳು ಇದರಲ್ಲಿ ನಿರೂಪಿತವಾಗಿವೆ. ೧೯೧೧ರಷ್ಟು ಹಿಂದೆಯೇ, ಕನ್ನಡದಲ್ಲಿ ಜೀವನಚರಿತ್ರೆಗಳೇ ಇಲ್ಲವೆನ್ನುವಂಥ ಕಾಲದಲ್ಲಿ ಡಿ.ವಿ.ಜಿ. ಇದನ್ನು ಬರೆದು ಉಪಕಾರ ಮಾಡಿದ್ದಾರೆ. ಇದರಲ್ಲಿ ರಂಗಚಾರ್ಲು ಜೀವನದ ಎಲ್ಲ ಪ್ರಸಂಗಗಳನ್ನು ಕೂಲಂಕುಷವಾಗಿ ವಿವರಿಸದಿದ್ದರೂ, ಒಟ್ಟಿನಲ್ಲಿ ದಿವಾನರ ಪರಿಚಯ ಆಗುತ್ತದೆ. ರಂಗಾಚಾರ್ಲು ಅವರ ಬದುಕಿನಲ್ಲಿ ವಿಶೇಷವಾಗಿ ಕಂಡುಬರುವ, ಸಂಸ್ಥಾನದ ಅಭಿವೃದ್ಧಿಯ ಆಕಾಂಕ್ಷೆ, ಪ್ರಜೆಗಳನ್ನು ಕುರಿತ ಚಿಂತನೆ, ಚಿಂತನೆಯನ್ನು ಅನುಷ್ಟಾನಗೊಳಿಸುವುದರಲ್ಲಿನ ಆಸಕ್ತಿ ಇವನ್ನು ಕಾಣಬಹುದು. ಇದೊಂದು ವಾಸ್ತವಿಕ ಚಿತ್ರಣ.