ಈ ಪ್ರಬಂಧದ ಬಹುಭಾಗ ಮೊದಲು ಪ್ರಕಟವಾದದ್ದು ೧೯೨೩ರ ಜೂನ್-ಡಿಸೆಂಬರುಗಳಲ್ಲಿ, -ಆಗ ನಾನು ನಡೆಸುತ್ತಿದ್ದ “ಕರ್ಣಾಟಕ ಜನಜೀವನ ಮತ್ತು ಅರ್ಥ ಸಾಧಕ ಪತ್ರಿಕೆ” ಎಂಬ ಮಾಸ ಪತ್ರಿಕೆಯಲ್ಲಿ. ಅದನ್ನು ಬರೆದದ್ದು ಅಂದಿಗೆ ಒಂದೆರಡು ವರ್ಷ ಹಿಂದೆ. ಹೀಗೆ ಸಮಾರು ಮುವ್ವತ್ತೆರಡು ವರ್ಷಗಳಷ್ಟು ಹಳೆಯದು ಈ ಪ್ರಬಂಧ. ಈ ಮಾತು ಇಲ್ಲಿಯ ಮೊದಲನೆಯ ಹನ್ನೆರಡು ಪ್ರಕರಣಗಳಿಗೆ ಅನ್ವಯಿಸುತ್ತವೆ. ಕಡೆಯ ಮೂರು ಪ್ರಕರಣಗಳು ಹೊಸವು. ಆ ಗ್ರಂಥವನ್ನು ಬರೆದ ಕಾಲದಲ್ಲಿ ಈ ಪ್ರಬಂಧ ನನ್ನೆದುರಿಗಿರಲಿಲ್ಲ. ಇದಕ್ಕಾಗಿ ಹುಡುಕಾಡಲು ನನಗೆ ಆಗ ವಿರಾಮ ದೊರೆಯಲಿಲ್ಲ. ಈಚೆಗೆ ಶ್ರೀ ಚಿದಂಬರಂ ಅವರ ಒಂದು ಉದ್ದೇಶಕ್ಕಾಗಿ ನಾನು ಯಾವುದೋ ಹಳೆಯ ಕಾಗದಗಳನ್ನು ಹುಡುಕುತ್ತಿದ್ದಾಗ ಇದು ಅಕಸ್ಮಾತ್ತಾಗಿ ಕಣ್ಣಿಗೆ ಬಿತ್ತು. ನೋಡಿದ್ದರಲ್ಲಿ ಈ ಪ್ರಬಂಧವು ಆ ‘ರಾಜ್ಯಶಾಸ್ತ್ರ’ ಗ್ರಂಥದಲ್ಲಿ ತಕ್ಕಷ್ಟು ವಿಸ್ತರಿಸಲಾಗದಿದ್ದ ಕೆಲವು ಮುಖ್ಯಾಂಶಗಳನ್ನು ವಿಸ್ತಾರಪಡಿಸಿದೆಯೆಂದೂ, ಅಲ್ಲಿಯ ಕೆಲವು ಸಾರ ವಿಚಾರಗಳಿಗೆ ಪೀಠಿಕಾಪ್ರಾಯವಾಗಿದೆಯೆಂದೂ ತೋರಿತು. ಈ ಎರಡು ಪುಸ್ತಕಗಳಿಗೂ ಒಂದೆರಡು ಭಾಗಗಳಲ್ಲಿ ವಿಷಯ ಒಂದೇ ಎಂಬಂತೆ ಸ್ಥೂಲವಾಗಿ ಕಂಡರೂ ಜಿಜ್ಞಾಸಿತಗಳಾಗಿರುವ ತತ್ತ್ವಗಳು ಸ್ವಭಾವದಲ್ಲಿ ಸೂಕ್ಷ್ಮವಾದವೂ ಹಾಗೆಯೇ ನಮಗೆ ಬಹಳ ಮುಖ್ಯವಾದವೂ ಆಗಿರುವ ಕಾರಣ ಇಲ್ಲಿಯ ಪುನರ್ವಿಚಿಂತನೆಯು ಅಯುಕ್ತವಾಗದು, ಉಪಯುಕ್ತವಾಗಬಹುದು.