ಈ ಕವನಸಂಗ್ರಹಕ್ಕೆ “ವಸಂತ ಕುಸುಮಾಂಜಲಿ” ಎಂದು ಹೆಸರು ಕೊಟ್ಟವರು ಶ್ರೀ ಟಿ. ಎಸ್. ವೆಂಕಣ್ಣಯ್ಯನವರು. ವಿಷಯದಲ್ಲಿಯೂ ಶೈಲಿಯಲ್ಲಿಯೂ ಈ ಕವನಗಳು ಕನ್ನಡಪ್ರಪಂಚಕ್ಕೆ ಆಗ ಬರಲಿದ್ದಂತೆ ತೋರಿದ ಹೊಸ ವಸಂತಕಾಲದ ಮೊದಲ ಗುರುತಿನ ಮೊಗ್ಗುಗಳಂಥವು - ಎಂಬುದು ಅವರ ಭಾವನೆ. ಅದು ಸ್ನೇಹಾಭಿಮಾನದ ಕಲ್ಪನೆ ಎಂದು ನನ್ನ ಮನಸ್ಸಿಗೆ ಆಗಲೂ ತೋರಿತ್ತು. ಅಂದಿನಿಂದ ಇದುವರೆಗಿನ ಸುಮಾರು ೩೦ ವರ್ಷಗಳಲ್ಲಿ ಕನ್ನಡ ಹೊಸತನವನ್ನು ಸಂಪಾದಿಸಿಕೊಂಡಿರುವುದು. ಈಗ ಚೆನ್ನಾಗಿ ಕಾಣುತ್ತಿದೆ. ಗ್ರಂಥದ ವಿಷಯ, ಶಬ್ದಸಾಮಗ್ರಿ, ವಾಕ್ಯರಚನೆಯ ರೀತಿ, ಪ್ರತಿಪಾದನಕ್ರಮ - ಇವೆಲ್ಲ ಹೊಸದಾಗುತ್ತಿವೆ. ಭಾಷೆಗೆ ಬಂದಿದ್ದ ಪೆಡಸುತನ, - ಅದರ ಎರಕದಚ್ಚಿನ ಸರಿತನ, - ಅದರ ಮರಮುಟ್ಟಿನ ಒಣ ಅಚ್ಚು ಕಟ್ಟು - ಈಗ ಸಡಿಲವಾಗಿ, ಅದಕ್ಕೆ ಜೀವಂತಾಂಗದ ಮೃದುತೆ ನಯನಮ್ಯತೆಗಳು ಬರುತ್ತಿವೆ. ಇಂಗ್ಲಿಷ್ ಮೊದಲಾದ ಇತರ ವ್ಯಾವಹಾರಿಕ ಭಾಷೆಗಳ ಧೋರಣೆಯ ಅನುಕರಣೆ ಕನ್ನಡ ಸಾಹಿತ್ಯದಲ್ಲಿ ಆಗುತ್ತಿದೆ. ಹೀಗೆ ಶ್ರೀಮಾನ್ ವೆಂಕಣ್ಣಯ್ಯನವರ ಭವಿಷ್ಯದ್ದೃಷ್ಟಿ ಈಗ ಫಲಕ್ಕೆ ಬರುತ್ತಿದೆಯೆಂದು ಹೇಳಬಹುದುಗಿದೆ. (ಅದು ಈ ಕೃತಿಗಳ ಪ್ರಭಾವವೆಂದು ಲೇಖಕನು ಎಷ್ಟುಮಾತ್ರವೂ ಎಣಿಸಿಕೊಂಡಿಲ್ಲವೆಂಬುದನ್ನು ಹೇಳಬೇಕಾದದ್ದಿಲ್ಲವಷ್ಟೆ?) ಈ ನವೋದಯಕ್ಕೆ ಕಾರಣ ಕಾಲಗರ್ಭದಲ್ಲಿ ಅಡಗಿ ಕೊಂಡಿರುವ ಮಾನವಪ್ರಗತಿ ಬೀಜ. ಆಗಿಂದಾಗಿಗೆ ಹೊಸಹೊಸದಾಗುತ್ತಿರುವುದು ಪ್ರಪಂಚದ ಎಲ್ಲ ಜೈವವಸ್ತುಗಳಿಗೂ ಸ್ವಭಾವಸಿದ್ಧವಾಗಿರುವ ಲಕ್ಷಣ. ಅದು ಭಾಷೆಸಾಹಿತ್ಯಗಳಿಗೂ ಉಂಟು. ಪ್ರಕೃತ, ಈ ಮುದ್ರಣದಲ್ಲಿ ಕೆಲವುಕಡೆ ಕೊಂಚ ಕೊಂಚ ತಿದ್ದುಪಡಿಗಳಾಗಿರುವುದಲ್ಲದೆ ಮೂರು ತುಣುಕುಗಳು ಹೊಸದಾಗಿ ಸೇರಿವೆ. ಇವುಗಳಲ್ಲಿ ಒಂದು ಬಹುಶಃ ಇಪ್ಪತ್ತೈದು ವರ್ಷಗಳಷ್ಟು ಹಳೆಯದು.