ಕೆಲವು ವರ್ಷಗಳಿಂದ ನಾನು ಅರೆಕುರುಡ; ಅರೆಯುಸಿರಿನವನು. ಈ ಅವಸ್ಥೆಯಲ್ಲಿ ನಿದ್ದೆಬಾರದಾಗ, ಆಯಾಸವಾದಾಗ, ತೋರಿಬಂದ ಭಾವನೆಗಳನ್ನು ಆಗ್ಗೆ ಒದಗಿಬಂದ ಮಾತಿನಲ್ಲಿ. ಆ ಸಮಯಕ್ಕೆ ಸಿಕ್ಕಿದ ಕಾಗದದ ಚೂರಿನಲ್ಲಿ. ಆಗ ಕೈಗೆ ದೊರೆತ ಲೇಖನಿಯಿಂದ ಗುರುತು ಮಾಡಿದ್ದಾಯಿತು. ಆದರೆ ಅವುಗಳನ್ನು ಒಂದು ಕ್ರಮದಲ್ಲಿ ಜೋಡಿಸಬೇಕೆಂದು ನೋಡಿದಾಗ ನಾನು ಗೀಚಿದ್ದ ಗೀಟುಗಳು ನನಗೆ ಅರ್ಥವಾಗದೆಹೋಯಿತು. ಈ ಕಷ್ಟಸ್ಥಿತಿಯಲ್ಲಿ ನನ್ನ ಗುರುತುಚೀಟಿಗಳ ಸಿಕ್ಕು ಬಿಡಿಸಿ ಓದಲಾಗುವಂತೆ ಮಾಡಿದವರು ನಾಲ್ವರೈವರು ಸ್ನೇಹಿತರು. ಅವರಲ್ಲಿ ನಾನು ಹೇಳಲೇಬೇಕೆಂದು ಗೊತ್ತುಮಾಡಿಕೊಂಡಿರುವ ಹೆಸರುಗಳು ಎರಡು : ಚಿ ॥ ಬಿ. ಎಸ್. ಸುಬ್ಬರಾಯರು. ಚಿ ॥ ಡಿ. ಆರ್. ವೆಂಕಟರಮಣನ್. ಈ ಸ್ನೇಹಿತರು ನನ್ನ ಕರಡುಗಳನ್ನು ಕೊಂಚಮಟ್ಟಿಗೆ ಅಳವಡಿಸಿ ಕೊಟ್ಟಮೇಲೆ ಬರವಣಿಗೆಯನ್ನೆಲ್ಲ ಆಮೂಲಾಗ್ರವಾಗಿ ಓದಿ ವಿರಳ ವಿರಳವಾಗಿ ನಕಲು ಬರೆದುಕೊಟ್ಟವರು ಚಿ ॥ ಎಸ್. ಆರ್. ರಾಮಸ್ವಾಮಿ. ಈತ ಅಂದವಾದ ನಕಲನ್ನು ತಯಾರುಮಾಡಿದ್ದಷ್ಟೇ ಅಲ್ಲ; ಬಿಡಿಬಿಡಿಯಾಗಿ ಬಿದ್ದಿದ್ದ ಪದ್ಯಗಳನ್ನು ಒಂದು ಸಮಂಜಸವಾದ ಕ್ರಮದಲ್ಲಿ ಜೋಡಿಸಿ, ಅರ್ಥ ಸುಲಭವಾಗುವಂತೆ ಅಣಿಮಾಡಿಕೊಟ್ಟಿದ್ದಾರೆ, ಮತ್ತು ಪ್ರಕರಣ ವಿಭಾಗಮಾಡಿ ಶೀರ್ಷಿಕೆಗಳನ್ನು ಬರೆದು ಸಾಂಗೋಪಾಂಗವಾಗಿ ಮುದ್ರಣಕ್ಕೆ ಸಿದ್ಧಪಡಿಸಿದ್ದಾರೆ. ಅಲ್ಲದೆ ಅರ್ಥಕೋಶವನ್ನೂ ಕರಂಡಗಳನ್ನು ಕುರಿತ ಅನುಬಂಧವನ್ನೂ ರಚಿಸಿಕೊಟ್ಟಿದ್ದಾರೆ. ಈ ಚಿರಂಜೀವಿಯ ಕೆಲಸವನ್ನು ಪೂರ್ತಿಯಾಗಿ ವಿವರಿಸುವುದು ಸಾಧ್ಯವಲ್ಲದ ಕೆಲಸ.