ವೃತ್ತಪತ್ರಿಕೆಯ ಪ್ರಪಂಚ ದಿನೇ-ದಿನೇ ಬೆಳದುಕೊಂಡು ಹೋಗತಕ್ಕದ್ದು. ಅದರಲ್ಲಿಯ ಸಂದರ್ಭಗಳು ಪದೇ-ಪದೇ ಬದಲಾಯಿಸತಕ್ಕವು. ಆದದ್ದರಿಂದ ಅದನ್ನು ಕುರಿತ ಪುಸ್ತಕ “ಇಂದಿಗೆ ಮುಗಿಯಿತು, ವಿಷಯ ಪೂರ್ತಿಯಾಯಿತು” ಎಂದು ಯಾರೂ, ಯಾವ ಕಾಲದಲ್ಲೂ ಸಮಾಧಾನಪಡುವಂತಿಲ್ಲ. ಇಂದಿನ ಮಟ್ಟಿಗೆ ಅದು ಒಂದು ಸಂಕ್ಷೇಪ ಕ್ರಮದಲ್ಲಿ ಸಮಗ್ರವಾಯಿತು ಎಂದು ಹೇಳಿಕೊಳ್ಳುವಂತಾಗಿದ್ದರೆ ನನಗೆ ಸಾಕು. ಈ ತೀರ್ಮಾನ ವಾಚಕರ ಸಹಾನುಭೂತಿಯನ್ನು ಅವಲಂಬಿಸಿಕೊಂಡಿರುತ್ತದೆ. ವೃತ್ತಪತ್ರಿಕೋದ್ಯೋಗಿಗಳಿಗೆ ಅವಶ್ಯವಾಗಿ ತಿಳಿದಿರಬೇಕಾದದ್ದು ಅವರ ವೃತ್ತಿಗೆ ಸಂಬಂಧಪಟ್ಟ ಶಾಸನ ನಿಯಮಗಳ ಸ್ವರೂಪ. ಇದಕ್ಕಾಗಿ ವೃತ್ತಪತ್ರಿಕೆಗಳಿಗೆ ಅನ್ವಯಿಸಲಾಗುವ ಕಾನೂನುಗಳ ಪಟ್ಟಿಯನ್ನು ಅನುಬಂಧವಾಗಿ ಕೊಟ್ಟಿದೆ.