ಈ ಪುಸ್ತಕವು ವಿದ್ಯಾರಣ್ಯ ಚರಿತ್ರೆಯ ಎರಡನೆಯ ಭಾಗ: ಮೊದಲನೆಯ ಭಾಗದಲ್ಲಿರುವುದು ವಿಶೇಷವಾಗಿ ಆ ಮಹನೀಯರ ವೈಯಕ್ತಿಕ ವೃತ್ತಾಂತ; ಅದಕ್ಕೆ ಅನುಬಂಧ ರೂಪವಾದದ್ದು ಇದು,-ಅವರ ಸಮಕಾಲೀನರಾದ ಆರು ಮಂದಿ ಮಹನೀಯರನ್ನು ಕುರಿತದ್ದು. ವಿದ್ಯಾರಣ್ಯ ಚರಿತ್ರೆಯ ಯೋಚನೆ ಈ ಲೇಖಕನ ತಲೆಗೆ ಹತ್ತಿ ೨೦ ವರ್ಷಗಳ ಮೇಲೆ ಆಗಿದೆ. ಅವನು ಸಾಧಿಸಿರುವ ಭಾಗ ಮಾತ್ರ ಇನ್ನೂ ಸ್ವಲ್ಪವಾಗಿಯೇ ಇದೆ. ಪ್ರಾರಂಭ ಮಾಡುವಾಗ ಅವನಲ್ಲಿ ತಿಳಿವಳಿಕೆಗಿಂತ ಉತ್ಸಾಹ ಹೆಚ್ಚಾಗಿತ್ತು. ಸ್ವಲ್ಪ ದೂರ ನಡೆದ ಬಳಿಕ ಕೆಲಸದ ಕಷ್ಟಗಳು ಎಷ್ಟು ತೆರದವು, ಎಷ್ಟು ತೊಡಕಾದವು, ಎಂಬುದು ಅವನಿಗೆ ವಿಶದವಾಗಿ ಕಾಣಬರುವುದಾಯಿತು. ಈಗ ಕೆಲಸವಿಷ್ಟುಮಟ್ಟಿಗಾದರೂ ಸಾಗಿದೆಯಲ್ಲಾ ಎಂಬ ಸಮಾಧಾನಕ್ಕಿಂತ, ಇಂಥಾ ಪ್ರಯತ್ನಕ್ಕೆ ಬೇಕಾದ ಪಾಂಡಿತ್ಯವೂ ಕಾಲಾವಕಾಶವೂ ತನಗೆ ಇಲ್ಲದೆ ಹೋಗಿರುವುವಲ್ಲಾ ಎಂಬ ಕೊರತೆಯೇ ಅವನ ಮನಸ್ಸಿನಲ್ಲಿ ಹೆಚ್ಚಾಗಿದೆ. ಈ ಪುಸ್ತಕದ ಹಸ್ತಲಿಪಿಯ ಮೂಲ ಪ್ರತಿ ಕೆಲವು ವರ್ಷಗಳ ಹಿಂದೆ ಮೈಸೂರು ಸರಕಾರದ ವಿದ್ಯಾಶಾಖೆಯಲ್ಲಿ ಏರ್ಪಟ್ಟಿರುವ “ದೇವರಾಜ ಬಹದ್ದೂರ್ ಧರ್ಮದತ್ತಿ”ಯ ಸಾಹಿತ್ಯ ಸಂಭಾವನಾ ಸಮಿತಿಯ ಪರಾಮರ್ಶೆಗೆ ಪಾತ್ರವಾಗಿ, ಪ್ರಥಮ ಪಾರಿತೋಷಿಕವನ್ನು ಪಡೆಯಿತು. ನಮ್ಮ ದೇಶದ ಪೂರ್ವಚರಿತ್ರೆಯನ್ನು ಸಂಪಾದಿಸುವ ಪ್ರಯತ್ನದಲ್ಲಿ ಮೊದಮೊದಲು ಶ್ರಮಿಸುವವರಿಗೆ ಇಂಥಾ ಅನುಭವವು ಅನಿವಾರ್ಯವಾಗಿರುತ್ತದೆ. ಅವರಿಗೆ ಬೇಕಾಗಿರುವ ಮೂಲವಸ್ತು ಸಾಮಗ್ರಿ ಅವರ ಕೈಗೆ ಶುದ್ಧವಾಗಿ, ಸಿದ್ಧವಾಗಿ, ದೊರೆಯುವುದಾಗಿಲ್ಲ. ಆ ಸಾಮಗ್ರಿಯನ್ನು ಅವರು ಹುಡುಕಿ ತೆಗೆದು, ಜಾಗರೂಕತೆಯಿಂದ ಶೋಧಿಸಿ, ಸಿದ್ಧಪಡಿಸಿಕೊಳ್ಳಬೇಕಾಗಿದೆ. ಹೀಗೆ ಆಧಾರ ಸಾಮಗ್ರಿಯನ್ನು ಹುಡುಕಿಕೊಂಡು ನಡೆಯುತ್ತಿರುವಾಗ ಅವರಿಗೆ ಎಷ್ಟೋ ಅಡ್ಡದಾರಿಗಳೂ ಸೀಳುದಾರಿಗಳೂ ಸಿಕ್ಕುತ್ತವೆ. ಹೊಸದಾಗಿ ಕಾಣಬರುವ ನಿದರ್ಶನಗಳು ಹೊಸ ಸಂಗತಿಗಳನ್ನು ತರುವಂತೆಯೇ ಹೊಸ ಸಂಶಯಗಳನ್ನೂ ತರುತ್ತವೆ. ಇವುಗಳನ್ನು ಸರಿಪಡಿಸುವುದಕ್ಕಾಗಿ ಅವರು ಮತ್ತೆ ಬೇರೆ ಪ್ರಮಾಣಗಳನ್ನು ನೋಡಿ ವಿಚಾರ ನಡಸಬೇಕಾಗುತ್ತದೆ. ಹೀಗೆ ಕವಲು ಕವಲಾಗಿ ಒಡೆಯುವ ದಾರಿಗಳಲ್ಲಿ ಹೊಕ್ಕು ಹೋಗಿ, ಮರಳಿ ದೊಡ್ಡ ದಾರಿಗೆ ಬಂದು ಸೇರುವ ವೇಳೆಗೆ ವಿಷಯದ ಕ್ಷೇತ್ರವು ನಾಲ್ಕರಷ್ಟು ವಿಸ್ತಾರವಾಗಿರುತ್ತದೆ; ಒಂದು ಪ್ರಕರಣದಲ್ಲಿ ಮುಗಿಸಬೇಕೆಂದು ಆರಂಭಿಸಿದ ಗ್ರಂಥವು ನಾಲ್ಕಾರು ಪ್ರಕರಣಗಳಾಗುತ್ತದೆ. ಈ ವಿಚಾರದ ಸ್ವಭಾವವಿಂಥದೆಂದು ಹೇಳುವುದರಲ್ಲಿಯೇ ವಾಚಕ ಮಹಾಶಯರಿಗೆ ಒಂದು ಎಚ್ಚರಿಕೆಯ ಬಿನ್ನಹವು ಅಡಗಿದೆ. ಈ ಪುಸ್ತಕದಲ್ಲಿ ಆಗಿರುವ ಕಾಲ ನಿರ್ಣಯಗಳು ಸಂದರ್ಭ ನಿರ್ಣಯಗಳು ಕಟ್ಟಕಡೆಯ ಮಾತೇನೂ ಅಲ್ಲ. ಅವು ಬಹುಮಟ್ಟಿಗೆ “ಸ್ಯಾತ್” (ಬಹುದು) ರೀತಿಯವು. ಇನ್ನೂ ಮುಂದಿನ ಶೋಧನೆಗಳಿಂದ ಅವು ಮಾರ್ಪಡಲಾರವೆಂದು ಈಗ ಹೇಳಲಾಗದು. ಸದ್ಯಕ್ಕೆ ಅವು ಸಿದ್ಧಾಂತ.