ಮರುಳಸಿದ್ಧಯ್ಯನವರು ಸಮಾಜೋ-ಮಾನವಶಾಸ್ತ್ರ ದೃಷ್ಟಿಕೋನದಿಂದ ``ಮಾಕುಂಟಿಯ ಮುದುಕರು’’ ಪುಸ್ತಕವನ್ನು ಚಿಕ್ಕದಾಗಿ, ಚೊಕ್ಕವಾಗಿ ಹೊರತಂದಿದ್ದಾರೆ. ಬರಿ ಮುಪ್ಪಾದವರ ಸಮಸ್ಯೆಗಳನ್ನು ಅಧ್ಯಯನ ಮಾಡುವುದಲ್ಲದೆ, ಬದಲಾಗುತ್ತಿರುವ ಹಳ್ಳಿ ಸಮುದಾಯದಲ್ಲಿ ಮುದುಕರ ಪಾತ್ರದ ಬಗ್ಗೆ ವಿಶ್ಲೇಷಣೆಯನ್ನೂ ಮಾಡಿದ್ದಾರೆ. ಮಾಕುಂಟಿಯ ಮುದುಕರು ಒಟ್ಟು ಕುಟುಂಬದಲ್ಲಿ, ರಕ್ತ ಸಂಬಂಧಗಳಲ್ಲಿ ಮತ್ತು ಜಾತಿ ವ್ಯವಸ್ಥೆಯಲ್ಲಿ ಹೇಗೆ ತಮ್ಮ ಸಾಂಪ್ರದಾಯಕ ಪಾತ್ರವನ್ನು ಆಡುತ್ತಾರೆ ಎಂದು ತೋರಿಸಿದ್ದಾರೆ. ಹಾಗೆಯೇ ತಮ್ಮ ಸಾಮಾಜಿಕ ಸ್ಥಾನಮಾನ, ಪ್ರಭಾವಗಳನ್ನು ಕಿರಿಯ ಪೀಳಿಗೆಯವರ ಮುಂದೆ ಪಂಚಾಯಿತಿರಾಜ್ ಮೂಲಕ ಹೇಗೆ ಕಳೆದುಕೊಳ್ಳುತ್ತಿದ್ದಾರೆ ಎಂಬುದನ್ನೂ ವಿಶದಪಡಿಸಿದ್ದಾರೆ. ಆದರೂ ಹಿರಿಯರು ಅಜ್ಜ-ಅಜ್ಜಿಯರ ಪಾತ್ರಗಳಲ್ಲಿ, ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ, ಮದುವೆ ಸಂಬಂಧಗಳನ್ನು ಕೂಡಿಸುವಲ್ಲಿ ವಿಶೇಷಾಧಿಕಾರವನ್ನು ಪಡೆದಿರುತ್ತಾರೆ ಎಂಬುದನ್ನು ಒಪ್ಪಿಕೊಳ್ಳಬೇಕಾದ ಅಂಶವಾಗಿದೆ. ಮದುವೆ, ಮತ್ತಿತರ ಸಮಾರಂಭಗಳಲ್ಲಿ, ಇವರು ಕುಟುಂಬದ ಪ್ರತಿನಿಧಿಯಾಗಿ ಕಂಡುಬರುತ್ತಾರೆ. ಹೀಗಾಗಿ ಇವರುಗಳು ರಕ್ತ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ.