“ಕಲಸುಮೇಲೋಗರ” ಒಂದು ಕತೆಯಲ್ಲ, ಒಂದು ಕಾದಂಬರಿಯಲ್ಲ, ಒಂದು ಕವನ ಸಂಗ್ರಹವು ಅಲ್ಲ, ಒಂದು ಪ್ರಭಂದ ಸಂಗ್ರಹವು ಅಲ್ಲ, ಒಂದು ಬುದ್ಧಿಗೆ ಕಸರತ್ತು ಕೊಡುವ ವಿಚಾರಗಳು ಅಲ್ಲ. ಯಾವುದೇ ಗುತ್ತು ಗುರಿಯಿಲ್ಲದೆ ಬರೆದ ಸಂಗ್ರಹ ಅಂತ ಖಂಡಿತವಾಗಿ ಹೇಳಬಹುದು. “ಕಲಸುಮೇಲೋಗರ,” ಹೆಸರಿಗೆ ತಕ್ಕಂತೆ ಸೂಚಿಸುವ ಈ ಒಂದು ಸಣ್ಣ ಕೃತಿ ನಾನು ಹಲವಾರು ವರ್ಷಗಳಿಂದ ಬರೆದ ಕತೆ, ಕವನ, ಪ್ರಭಂದ, ಮತ್ತು ಮನದಲ್ಲಿ ಮೂಡಿದ ಭಾವನೆಗಳಿಗೆ ಒಂದು ರೂಪ ಕೊಟ್ಟು ನಿಮ್ಮೊಡನೆ ಹಂಚಿಕೊಳ್ಳುವ ಒಂದು ಮಿಶ್ರ ಪ್ರಯೋಗವಷ್ಟೇ.
ಡಾ. ರವಿ ಗೋಪಾಲರಾವ್ ಪರಿಚಯ:
ಮೂಲತಃ ಬೆಂಗಳೂರಿನವರಾದ ರವಿ ಗೋಪಾಲರಾವ್ ಅಮೆರಿಕಾಗೆ ಬಂದದದ್ದು ವಿದ್ಯಾರ್ಥಿಯಾಗಿ. ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯದಿಂದ ಡಾಕ್ಟೊರೇಟ್ ಪದವಿ ಪಡೆದು, ಕಳೆದ ಎರಡೂವರೆ ದಶಕಗಳಿಂದ ಸಿಲಿಕಾನ್ ಕಣಿವೆಯಲ್ಲಿ ಶೈಕ್ಷಣಿಕ, ಕನ್ಸಲ್ಟಿಂಗ್ ಮತ್ತು ಐ. ಟಿ. ಉದ್ಯಮದಲ್ಲಿ ತೊಡಗಿದ್ದಾರೆ. ಕನ್ನಡಾಭಿಮಾನಿ ರವಿಯವರು ಕೆಲವು ಸಣ್ಣ ಕತೆ ಹಾಗು ಕವನಗಳನ್ನು ಪ್ರಕಟಿಸಿದ್ದಲ್ಲದೆ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ 2004 ಮತ್ತು 2016ರ ‘ಸ್ವರ್ಣಸೇತು’ ಸಂಚಿಕೆಯ ಪ್ರಧಾನ ಸಂಪಾದಕರಾಗಿ ಅಳಿಲುಸೇವೆ ಸಲ್ಲಿಸಿದ್ದಾರೆ. ನೆಬರಾಸ್ಕ ಕನ್ನಡ ಕೂಟದ ಸ್ಥಾಪಕರಾಗಿ ಮತ್ತು ಅಕ್ಕ 2014 ಸಾಹಿತ್ಯ ವೇದಿಕೆ ಬಿಡುಗಡೆ ಮಾಡಿದ ‘ಕಥಾಸಂಭ್ರಮ’ದ ಸಹಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ. ಕನ್ನಡ ಸಾಹಿತ್ಯ ರಂಗ (ಯು.ಎಸ್.ಏ) ಪುಸ್ತಕಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ತಮ್ಮ ಬಿಡುವಿನ ವೇಳೆಯಲ್ಲಿ ರವಿಯವರು ಕನ್ನಡ ಪುಸ್ತಕಗಳನ್ನು ಓದುವುದು ಹಾಗು ಸಂಗೀತ ಕೇಳುವ ಹವ್ಯಾಸದೊಂದಿಗೆ ಛಾಯಾಚಿತ್ರ ಮತ್ತು ತಮ್ಮದೇ ಬ್ಲಾಗ್ ‘ಗಂಧಾಕ್ಷತೆ’ಗೆ ಬರೆಯುವುದರಲ್ಲಿ ಉತ್ಸುಕರಾಗಿರುತ್ತಾರೆ. ಪತ್ನಿ ಪ್ರತಿಭಾ ಮತ್ತು ಇಬ್ಬರು ಪುತ್ರಿಯರೊಂದಿಗೆ ಕ್ಯಾಲಿಫೋರ್ನಿಯದಲ್ಲಿ ನೆಲಸಿದ್ದಾರೆ. ಅವರನ್ನು ಸಂಪರ್ಕಿಸಲು ಈಮೈಲ್: ravi.gopalarao@gmail.com