ಗಾಯನನಿಪುಣರೂ ನಾಟ್ಯನಿಪುಣರೂ ಬೆಲೆಕೊಡಬಹುದಾದ ಸಂಗತಿ ಈ ಪುಸ್ತಕದಲ್ಲೇನೂ ಇರಲಾರದು. ಶಾಸ್ತ್ರಜ್ಞಾನವಿಲ್ಲದೆ, ಅಭ್ಯಾಸಬಲವಿಲ್ಲದೆ, ಬರಿಯ ಖುಷಿಗಾಗಿ ಸಂಗೀತ ಕೇಳಿ ನಾಟ್ಯ ನೋಡಿದ ಒಬ್ಬ ಸಾಮಾನ್ಯ ಮನುಷ್ಯನು ತನ್ನಂಥ ಸಾಮಾನ್ಯರಿಗಾಗಿ ತನ್ನ ಅನುಭವಗಳನ್ನು ಗುರುತುಹಾಕಿಟ್ಟ ಪುಸ್ತಕ ಇದು. ನಾನು ಹುಟ್ಟಿ ಬೆಳೆದ ಮನೆಯ ನೆರೆಹೊರೆಯಲ್ಲಿ ಗಾಯಕರ ಮತ್ತು ನರ್ತಕರ ಮನೆಗಳಿದ್ದವು. ಅಂಥ ಸಹವಾಸ ಚಿಕ್ಕಂದಿನಿಂದ ನನಗೆ ದೊರೆತಿದ್ದದ್ದರಿಂದ ಕೊಂಚ ಕಲಾಭಿರುಚಿಯುಂಟಾಗಿರಬಹುದು. ಆಮೇಲೆ ಅದು ಬೆಳೆಯಲು ಅವಕಾಶ ದೊರೆಯಿತು. ನನ್ನ ತೀರ್ಥರೂಪ ಮಾವಂದಿರಾದ ದಿವಂಗತ ಬಿ. ಎಸ್. ರಾಮಯ್ಯನವರು ಸಂಗೀತಪ್ರೇಮಿಗಳು. ಸಂಗೀತಗಾರನ ಜಾರುಗಳೂ ಕೊಂಕುಗಳೂ ಹೇಗೋ ಕಲಾಕರ್ತನ ಮರ್ಮಗಳೂ ಸ್ವಾರಸ್ಯಗಳೂ ಹಾಗೆಯೇ ಲೇಖನಾತೀತಾಗಳು-ಹಾಗೆ ಅನುಭವದಿಂದಲೇ ತಿಳಿಯಲಾಗತಕ್ಕವು. ಆ ಅನುಭವವು ನೀರಿನ ಆವಿಯಂತೆ; ಗೊತ್ತಾದ ಮೈಕಟ್ಟಲ್ಲದವು. ಕಲಾಜೀವಿಯ ಸಿದ್ಧಿಯೇ ಹೀಗೆ ಅವಿಲೇಖ್ಯವೆಂದಮೇಲೆ, ಅವನ ಜೀವಿತಚರಿತ್ರೆಯೆಂಬುದೆಂಥದು? ಕವಿ, ಶಾಸ್ತ್ರವಿದ್ವಾಂಸ, ಗಾಯಕ, ನರ್ತಕಿ-ಇಂಥವರ ಜೀವನ ಅಂತರಂಗದ್ದು, ಬಹಿರಂಗದ್ದಲ್ಲ. ರಾಜಕೀಯಸ್ಥನ ಜೀವನವೂ ವ್ಯಾಪಾರಿಯ ಜೀವನವೂ ಬಹಿರಂಗದ್ದು. ಅವರಿಗೆ ಗಿರಾಕಿ ಬೇಕು. ಆದದ್ದರಿಂದ ಅವರು ಹೊರಗಣ ಜನದೊಡನೆ ಹೆಣಗಾಡಬೇಕು: ಹಾರಬೇಕು, ಹೀಗೆ ಪ್ರಪಂಚವನ್ನು ತಮ್ಮೆಡೆಗೆ ಸೆಳೆದುಕೊಳ್ಳಬೇಕು. ಈ ಕಾರ್ಯಾವಸರದಲ್ಲಿ ಅವರು ಮಾಡುವ ಸಾಹಸಗಳೂ ಉಪಾಯಗಳೂ ಅನುಸಂಧಾನಗಳೂ ವರ್ಣನೆಗೆ ವಿಷಯಗಳಾಗುತ್ತವೆ. ರಾಜಕೀಯಸ್ಥನ ಭಾಷಣಘೋಷಣಗಳು ಗ್ರಂಥವಸ್ತುವಾಗುತ್ತವೆ. ಗಾಯಕನ ಗಾನವಿಲಾಸಗಳನ್ನು ಹಾಗೆ ಬರೆದು ಅಚ್ಚಿಡಲಾದೀತೆ? ಕಲೋಪಾಸಿಯೂ ಶಾಸ್ತ್ರ ಪಾಠಕನೂ ಬದುಕುವುದು ಅವರವರ ಒಳಗೆ-ಅವರವರ ಮನಸ್ಸು ಬುದ್ಧಿಗಳ ಒಳಗಡೆ. ಹೊರಗಡೆಗೆ ಅವರು ಎಲ್ಲ ಮನುಷ್ಯರಂತೆ ಇರುತ್ತಾರೆ-ಸಾಮಾನ್ಯವಾಗಿ. ದೇಹಪ್ರವೃತ್ತಿಗಳಲ್ಲಿ ಕಲೆಗಾರನ ವಿಶೇಷವೇನೂ ಇಲ್ಲ, ಅಲ್ಲಿ ಅವನೂ ಪ್ರಕೃತಿಗೊಳಪಟ್ಟವನೇ; ಅವನ ವಿಶೇಷವೇನಿದ್ದರೂ ಅಂತರಂಗದಲ್ಲಿ. ಆದದ್ದರಿಂದ ಕವಿ ಗಾಯಕ ನರ್ತಕ ಶಿಲ್ಪಿ ಚಿತ್ರಕಾರರನ್ನು ಕುರಿತ ಜೀವಿತಚರಿತ್ರೆಗಳು ಬಹುಮಟ್ಟಿಗೆ ಔಪಚಾರಿಕ ಕೃತಿಗಳಾಗಿರುತ್ತವೆ; ವಾಸ್ತವಿಕವಲ್ಲ. ಅವು ರಾಜಕೀಯಸ್ಥನ ಜೀವಿತಚರಿತ್ರೆಗೆ ಸಮನಾಗಿ ವಿಸ್ತರಿಸಲಾರವು. ಗಾಯಕನ ಜೀವಿತಚರಿತ್ರೆ ನಾಮಮಾತ್ರಕ್ಕೆ ಜೀವಿತಚರಿತ್ರೆ.