ಇದು ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರಗಳನ್ನು ಯಾರ ಸಹಾಯವೂ ಇಲ್ಲದೆ ಕಲಿಯುವ ಆಟ.
ಮಕ್ಕಳು ದಿನಕ್ಕೆ ಕೇವಲ 15 ನಿಮಿಷಗಳ ಕಾಲ ಈ ಆಟವನ್ನಾಡಿದರೂ, ಇದರಿಂದ ಅವರ ಆತ್ಮವಿಶ್ವಾಸ ಹೆಚ್ಚುವುದನ್ನು ನೀವೇ ಕಾಣಬಹುದು. ಈ ತಂತ್ರಾಂಶವು ಮಕ್ಕಳ ಕಲಿಕಾಗುಣಮಟ್ಟಕ್ಕೆ ಅನುಗುಣವಾಗಿ ಲೆಕ್ಕಗಳನ್ನು ಕೊಡುತ್ತದೆ. ಮೊದಲಿಗೆ ಅತಿ ಸುಲಭವಾದ ಲೆಕ್ಕಗಳಿಂದ ಪ್ರಾರಂಭಿಸಿ, ಅಂಕಗಳು ಹೆಚ್ಚಾಗುತ್ತಿದ್ದಂತೆ ಕ್ರಮೇಣ ಕಠಿಣವಾದ ಲೆಕ್ಕಗಳನ್ನು ಕೊಡುತ್ತದೆ.
ಪ್ರತಿ ಬಾರಿ ಹೊಸ ಲೆಕ್ಕವನ್ನು ಕೇಳಿದಾಗ, ತಂತ್ರಾಂಶವು ನಾಲ್ಕು ಮೂಲಕ್ರಿಯೆಗಳಲ್ಲಿ ಒಂದನ್ನು ಆಯ್ಕೆ ಮಾಡಿ, ಬೇರೆ ಬೇರೆ ಸಂಖ್ಯೆಗಳನ್ನು ಬಳಸಿ, ತಾನೇ ಹೊಸದೊಂದು ಲೆಕ್ಕವನ್ನು ರಚಿಸಿ ಕೊಡುತ್ತದೆ. ಇದರಿಂದ ಮಗುವಿಗೆ ಪ್ರತೀ ಬಾರಿಯೂ ಈ ಬಾರಿ ತನಗೆ ಯಾವ ಮೂಲಕ್ರಿಯೆ ಸಿಕ್ಕುವುದೋ, ಯಾವ ಸಂಖ್ಯೆಗಳು ದೊರೆಯುವುದೋ ಎಂಬ ಕುತೂಹಲ ಹುಟ್ಟಿ ಆಟಕ್ಕೆ ಮತ್ತಷ್ಟು ಕಳೆಯೇರುತ್ತದೆ.
ಲೆಕ್ಕವನ್ನು ಬಿಡಿಸುವ ಪ್ರತಿ ಹಂತದಲ್ಲೂ ತಂತ್ರಾಂಶವು ಎಷ್ಟು ಸಹಾಯ ಬೇಕೋ ಅಷ್ಟು ಮಾತ್ರ ಸಹಾಯವನ್ನು ಕೊಟ್ಟು ಮಗುವನ್ನು ಮುಂದಿನ ಹಂತಕ್ಕೆ ಕರೆದೊಯ್ಯುತ್ತದೆ. ಸರಿಯಾಗಿ ನೀಡಿದ ಪ್ರತಿ ಅಂಕಿಗೂ ಸೂಕ್ತ ಅಂಕಗಳನ್ನು ಕೊಡಲಾಗುತ್ತದೆ.
ಆಟದ ಹೆಸರನ್ನು ಹೆಚ್ಚು ಹೊತ್ತು ಮುಟ್ಟಿ ಆಟಕ್ಕೆ ಬೇರೆ ಭಾಷೆಯನ್ನು ಆರಿಸಬಹುದು. ಈಗ ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳನ್ನು ತಂತ್ರಾಂಶದಲ್ಲಿ ಅಳವಡಿಸಿಕೊಳ್ಳಲಾಗಿದೆ. ಇಷ್ಟರಲ್ಲೇ ಇತರ ಭಾರತೀಯ ಬಾಷೆಗಳನ್ನು ಅಳವಡಿಸಿಕೊಳ್ಳುವ ಯೋಜನೆಯಿದೆ.
ಅಂಕಗಳ ಗುಂಡಿಯನ್ನು ಮುಟ್ಟಿದಾಗ ನಾಲ್ಕೂ ಮೂಲಕ್ರಿಯೆಗಳಲ್ಲಿ ದೊರೆತಿರುವ ಅಂಕಗಳನ್ನು ವಿವರವಾಗಿ ತೋರಿಸಲಾಗುತ್ತದೆ. ಹಾಗೇ ಈ ಗುಂಡಿಯನ್ನು ಹೆಚ್ಚು ಹೊತ್ತು ಮುಟ್ಟಿದರೆ ಅಂಕಗಳನ್ನು ಸಂಪೂರ್ಣವಾಗಿ ಅಳಿಸಿ ಹಾಕಿ, ಹೊಸದಾಗಿ ಪ್ರಾರಂಭಿಸುವ ಸೌಲಭ್ಯವೂ ಇದೆ.
ಈ ಜಾಹಿರಾತು-ರಹಿತ ತಂತ್ರಾಂಶವನ್ನು ಬೆಂಗಳೂರಿನ ಸುವಿದ್ಯಾ ಫೌಂಡೇಶನ್ ಸಂಸ್ಥೆಯು (http://www.suvidyafoundation.org) ಉಚಿತವಾಗಿ ವಿತರಿಸುತ್ತಿದೆ.
ಅಪ್‌ಡೇಟ್ ದಿನಾಂಕ
ಜುಲೈ 8, 2025