ಕಹೋ ನಾ... ಪ್ಯಾರ್ ಹೇ ೨೦೦೦ರ ಒಂದು ಹಿಂದಿ ಸಂಗೀತ ಪ್ರಣಯಪ್ರಧಾನ ರೋಮಾಂಚನಕಾರಿ ಚಲನಚಿತ್ರ. ಇದನ್ನು ರಾಕೇಶ್ ರೋಶನ್ ಬರೆದು ನಿರ್ದೇಶಿಸಿದ್ದಾರೆ. ಇದು ಹೃತಿಕ್ ರೋಷನ್ ಮತ್ತು ಅಮೀಶಾ ಪಟೇಲ್ ಅಭಿನಯದ ಮೊದಲ ಚಲನಚಿತ್ರವಾಗಿತ್ತು.
ಆ ವರ್ಷದಲ್ಲಿ ಅತಿ ಹೆಚ್ಚು ಹಣಗಳಿಸಿದ ಕಹೋ ನಾ.. ಪ್ಯಾರ್ ಹೇ ೨೦೦೦ನೇ ಸಾಲಿನ ಅತ್ಯಂತ ಯಶಸ್ವಿ ಬಾಲಿವುಡ್ ಚಲನಚಿತ್ರವಾಗಿತ್ತು. ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದ ಹೃತಿಕ್ ರಾತ್ರೋರಾತ್ರಿ ಸೂಪರ್ಸ್ಟಾರ್ ಆದರು. ಮಾಧ್ಯಮಗಳು ಅವರ ಯಶಸ್ವಿ ಪಾದಾರ್ಪಣೆಯನ್ನು 'ಹೃತಿಕ್ ಮೇನಿಯಾ' ಎಂದು ಕರೆದರು, ಮತ್ತು ಅಂದಿನಿಂದ ಅವರು 'ಸಹಸ್ರವರ್ಷದ ಸೂಪರ್ಸ್ಟಾರ್' ಎಂದು ಪರಿಚಿತರಾಗಿದ್ದಾರೆ.
ಕಹೋ ನಾ.. ಪ್ಯಾರ್ ಹೇ ಅತಿ ಹೆಚ್ಚು ಪ್ರಶಸ್ತಿಗಳನ್ನು—ಅಸಂಖ್ಯಾತ ಸಮಾರಂಭಗಳು ಮತ್ತು ವರ್ಗಗಳಲ್ಲಿ ಒಟ್ಟು ೯೨ ಪ್ರಶಸ್ತಿಗಳನ್ನು ಗೆದ್ದಿದ್ದಕ್ಕಾಗಿ ಗಿನ್ನೆಸ್ ದಾಖಲೆಗಳ ಪುಸ್ತಕದಲ್ಲಿ ಸೇರ್ಪಡೆಯಾಯಿತು. ಅದೇ ರೀತಿ ಅತಿ ಹೆಚ್ಚಿನ ಸಂಖ್ಯೆಯ ಪ್ರಶಸ್ತಿಗಳನ್ನು ಗೆದ್ದ ಬಾಲಿವುಡ್ ಚಿತ್ರವಾಗಿದ್ದಕ್ಕಾಗಿ ಲಿಮ್ಕಾ ದಾಖಲೆಗಳ ಪುಸ್ತಕದಲ್ಲಿ ಕೂಡ ಸೇರ್ಪಡೆಯಾಗಲಿದೆ. ನಿರ್ದೇಶಕ ಮತ್ತು ನಿರ್ಮಾಪಕರಾಗಿ, ರಾಕೇಶ್ ರೋಶನ್ ತಮ್ಮ ಮೊಟ್ಟಮೊದಲ ಫಿಲ್ಮ್ಫೇರ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಅವರ ಮಗ ಒಂದೇ ಚಲನಚಿತ್ರಕ್ಕೆ ಫಿಲ್ಮ್ಫೇರ್ ಅತ್ಯುತ್ತಮ ಪ್ರಥಮ ಪ್ರವೇಶ ಪ್ರಶಸ್ತಿಯನ್ನು ಮತ್ತು ಫಿಲ್ಮ್ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದ ಏಕೈಕ ನಟ ಎನಿಸಿಕೊಂಡರು.
ಈ ಚಿತ್ರವು ೧೯೮೬ರ ಕನ್ನಡ ಚಲನಚಿತ್ರ ರಥಸಪ್ತಮಿಯಿಂದ ಸ್ಫೂರ್ತಿ ಪಡೆದಿತ್ತು.