ತಾರೆ ಜ಼ಮೀನ್ ಪರ್ ೨೦೦೭ರ ಒಂದು ಹಿಂದಿ ನಾಟಕೀಯ ಚಲನಚಿತ್ರ. ಇದನ್ನು ಆಮಿರ್ ಖಾನ್ ನಿರ್ಮಿಸಿ ನಿರ್ದೇಶಿಸಿದರು. ಚಲನಚಿತ್ರವು ಡಿಸ್ಲೆಕ್ಸಿಯಾ ಇರುವ ೮ ವರ್ಷ ವಯಸ್ಸಿನ ಮಗು ಇಶಾನ್‍ನ ಜೀವನ ಮತ್ತು ಕಲ್ಪನೆಯನ್ನು ಅನ್ವೇಷಿಸುತ್ತದೆ. ಅವನು ಕಲೆಯಲ್ಲಿ ಮುಂದೆ ಇದ್ದರೂ, ಅವನ ಕಳಪೆ ಶೈಕ್ಷಣಿಕ ಸಾಧನೆಯ ಕಾರಣ ಅವನ ತಂದೆತಾಯಿ ಅವನನ್ನು ವಸತಿಶಾಲೆಗೆ ಕಳಿಸುತ್ತಾರೆ. ಅವನಿಗೆ ಡಿಸ್ಲೆಕ್ಸಿಯಾ ಇದೆ ಎಂದು ಇಶಾನ್‍ನ ಹೊಸ ಕಲಾ ಶಿಕ್ಷಕನು ಶಂಕಿಸಿ ಅವನಿಗೆ ಅವನ ಅಸಮರ್ಥತೆಯನ್ನು ಜಯಿಸಲು ನೆರವಾಗುತ್ತಾನೆ. ದರ್ಶೀಲ್ ಸಫ಼ಾರಿ ೮ ವರ್ಷದ ಇಶಾನ್ ಆಗಿ ನಟಿಸಿದ್ದರೆ, ಖಾನ್ ಅವನ ಕಲಾ ಶಿಕ್ಷಕನ ಪಾತ್ರವಹಿಸಿದ್ದಾರೆ.
ಸೃಜನಾತ್ಮಕ ನಿರ್ದೇಶಕ ಮತ್ತು ಬರಹಗಾರ ಅಮೋಲ್ ಗುಪ್ತೆ ಆರಂಭದಲ್ಲಿ ಚಿತ್ರದ ಸಂಕಲನಗಾರ್ತಿಯಾಗಿ ಕಾರ್ಯನಿರ್ವಹಿಸಿದ ತಮ್ಮ ಹೆಂಡತಿ ದೀಪಾ ಭಾಟಿಯಾರೊಂದಿಗೆ ಕಲ್ಪನೆಯನ್ನು ಅಭಿವೃದ್ಧಿಪಡಿಸಿದರು. ಶಂಕರ್-ಎಹಸಾನ್-ಲಾಯ್ ಚಲನಚಿತ್ರದ ಸಂಗೀತವನ್ನು ಸಂಯೋಜಿಸಿದರು ಮತ್ತು ಅನೇಕ ಗೀತೆಗಳಿಗೆ ಪ್ರಸೂನ್ ಜೋಶಿ ಸಾಹಿತ್ಯವನ್ನು ಬರೆದರು. ಪ್ರಧಾನ ಛಾಯಾಗ್ರಹಣವು ಮುಂಬೈ ಮತ್ತು ಪಂಚ್ ಗಣಿಯ ನ್ಯೂ ಈರಾ ಹೈ ಸ್ಕೂಲ್‍ನಲ್ಲಿ ನಡೆಯಿತು, ಮತ್ತು ಆ ಶಾಲೆಯ ಕೆಲವು ವಿದ್ಯಾರ್ಥಿಗಳು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.
ಚಲನಚಿತ್ರವು ಭಾರತದಲ್ಲಿ ೧೪ ಡಿಸೆಂಬರ್ ೨೦೦೭ರಲ್ಲಿ ಬಿಡುಗಡೆಗೊಂಡಿತು, ಮತ್ತು ಚಿತ್ರದ ಡಿವಿಡಿಯನ್ನು ೨೦೦೮ರಲ್ಲಿ ಬಿಡುಗಡೆ ಮಾಡಲಾಯಿತು. ಡಿಸ್ನಿ ನಂತರ ಅಂತರರಾಷ್ಟ್ರೀಯ ಆವೃತ್ತಿಯ ಡಿವಿಡಿಯನ್ನು ಬಿಡುಗಡೆ ಮಾಡಿತು. ಇದು ಒಂದು ಭಾರತೀಯ ಚಿತ್ರದ ವಿತರಣಾ ಹಕ್ಕುಗಳನ್ನು ಜಾಗತಿಕ ಕಂಪನಿಯೊಂದು ಖರೀದಿಸಿದ ಮೊದಲ ಸಲವಾಗಿತ್ತು.