ವೃತ್ತಿಯಲ್ಲಿ ಸಮಲೋಚಕ ಸಿವಿಲ್ ಇಂಜಿನಿಯರ್ (Consulting Civil Engineer) ಆಗಿರುವ ಎನ್.ಶಂಕರಪ್ಪ ತೋರಣಗಲ್ಲು ಅವರು ವೈಚಾರಿಕ ಮತ್ತು ಸಂಶೋಧನಾ ಕೃತಿಗಳ ರಚನೆಯಿಂದ ಗಮನ ಸೆಳೆದಿದ್ದಾರೆ. ಪ್ರಾಚೀನ ಲಿಪಿಗಳನ್ನು ಬಿಡಿಸಿ ಓದಲು ನಡೆದ ಬೌದ್ಧಿಕ ಸಾಹಸವನ್ನು ‘ಲಿಪಿ ನಿಗೂಢ’ ಕೃತಿಯಲ್ಲಿ ಹಿಡಿದಿಟ್ಟಿದ್ದರೆ, ಆರ್ಯರು ಯಾರು ? ಅವರು ಎಲ್ಲಿಂದ ಬಂದರು ಎನ್ನುವ ಪ್ರಶ್ನೆಯನ್ನು ಎತ್ತಿಕೊಂಡು ‘ಆರ್ಯರಿಗಾಗಿ ಹುಡುಕಾಟ : ಹೊರಗೆ-ಒಳಗೆ’ ರಚಿಸಿದ್ದಾರೆ. ‘ಸರ್ ಎಂ.ವಿ-ಒಂದು ಬಿಚ್ಚು ನೋಟ’ ಕೃತಿಯಲ್ಲಿ ಬಹುವಾಗಿ ವೈಭವೀಕರಣಗೊಂಡಿರುವ ಸರ್.ಎಂ. ವಿಶ್ವೇಶ್ವರಯ್ಯನವರನ್ನು ತಾಂತ್ರಿಕ ವಿಮರ್ಶೆಗೆ ಒಳಪಡಿಸಿದ್ದಾರೆ. ‘ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು’ ಕೃತಿಯಲ್ಲಿ ಜನಪ್ರಿಯ ರಾಷ್ಟ್ರೀಯ ನಾಯಕ ವಿವೇಕಾನಂದ ಮತ್ತು ಅಜ್ಞಾತ ಸ್ವಾಮಿ ವಿವೇಕಾನಂದರನ್ನು ಬೇರ್ಪಡಿಸಿ ನೋಡಿದ್ದಾರೆ. ‘ಭಗವದ್ಗೀತೆ ಬೆಳಕು ನೀಡುವುದೇ’ ಹಾಗೂ ‘ಯೋಗ : ಭ್ರಮೆ ಮತ್ತು ವಾಸ್ತವ’ ಪುಸ್ತಕಗಳಲ್ಲಿ ವಿಭಿನ್ನ ವೈಚಾರಿಕ ಚಿಂತನೆಗಳನ್ನು ಪ್ರತಿಪಾದಿಸಿದ್ದಾರೆ. ‘ವಾಸ್ತು ಎಂಬ ವ್ಯಾಧಿ’ ಕೃತಿಯಲ್ಲಿ ಭಾರತವನ್ನು ಕಾಡುತ್ತಿರುವ ವಾಸ್ತುಶಾಸ್ತ್ರದ ಪೊಳ್ಳುತನವನ್ನು ಬಯಲಿಗೆಳೆದಿದ್ದಾರೆ. ‘ಅನಂತ-ಹಲವು ಸಾಂತ ಚಿಂತನೆಗಳು’ ಪುಸ್ತಕದಲ್ಲಿ ಗಣಿತ ಮತ್ತು ತತ್ತ್ವ ಶಾಸ್ತ್ರದಲ್ಲಿರುವ ಅನಂತದ ಕಲ್ಪನೆಯನ್ನು ಚರ್ಚಿಸಿದ್ದಾರೆ. ವಿಜ್ಞಾನಿಗಳು : ಜೀವನ-ಸಾಧನೆ, ಸಾಮಗ್ರಿಗಳು:ಹೊರಗೆ-ಒಳಗೆ ಇವರ ಇನ್ನಿತರ ಕೃತಿಗಳು.