Ebooks

ಸೌಂದರ್ಯ ತ್ರಿಕೂಟ, ಸಹಿತತೆಯಿಂದ ಸಾಹಿತ್ಯ, ಸಾಹಿತ್ಯ ಸಂಹಿತೆ, ರಸ, ರಸ ಭ್ರಾಂತಿ, ಕಾವ್ಯದ ಕೆಲಸ, ಷೇಕ್ಸ್ ಪಿಯರಿಗೆ ನಮಸ್ಕಾರ, ಮಹಾಭಾರತದ ಪಾತ್ರಗಳು, ಕಾವ್ಯವು ಸ್ವಭಾವೋಲ್ಲಾಸ ಈ ಪ್ರಬಂಧಗಳಲ್ಲಿ ಶ್ರೀ ಡಿ. ವಿ. ಜಿ.ಯವರು ಕಾವ್ಯದ ಸ್ವಭಾವ ರಸಾನುಭವಗಳಿಗೆ ಸಂಬಂಧಪಟ್ಟಂತೆ ವಿಷಯಗಳನ್ನು ವಿವೇಚಿಸಿದ್ದಾರೆ. ಈ ಸಂಗ್ರಹದ ಒಂದು ವಿಶೇಷವೆಂದರೆ ಕಾವ್ಯರಸಾನುಭೂತಿಗೆ ಉದಾಹರಣಪೂರ್ವಕವಾಗಿರುವ ‘ಮಹಾಭಾರತದ ಪಾತ್ರಗಳು’ ಎಂಬ ಅಪೂರ್ವವಾದ ಪ್ರಬಂಧ. ಈ ಪ್ರಬಂಧ ಲೇಖಕರು ಗೀತೋಪನ್ಯಾಸಗಳನ್ನು ಕೊಟ್ಟಾಗ ಅದಕ್ಕೆ ಭೂಮಿಕೆಯಾಗಬೇಕೆಂದು ಬರೆದುಕೊಂಡಿದ್ದ ಟಿಪ್ಪಣಿಗಳ ಸಂಗ್ರಹ. ಈ ಎಲ್ಲ ಪ್ರಬಂಧಗಳು ಈಗಾಗಲೇ ಜನಪ್ರಿಯವಾಗಿರುವ ‘ಸಾಹಿತ್ಯ ಶಕ್ತಿ’, ‘ಜೀವನ ಸೌಂದರ್ಯ ಮತ್ತು ಸಾಹಿತ್ಯ’ ಈ ಚಿರನೂತನ ಪ್ರಬಂಧಗಳ ಸಂಕಲನಕ್ಕೆ ಪೂರಕವಾದ ಗ್ರಂಥವಾಗುತ್ತದೆಯೆಂಬುದರಲ್ಲಿ ಸಂಶಯವಿಲ್ಲ.
ವಾರ್ತಾಪತ್ರಿಕೋದ್ಯೋಗ ನನ್ನ ಜೀವನ. ಅಂಥವನ ಕೈಗೆ ದೊರೆಯುವ ವಿಚಾರಗಳು ಆಯಾ ಕ್ಷಣಕ್ಕೆ ಮಾತ್ರ ಮುಖ್ಯವೆನಿಸಿದವು. ಅಂಥ ಕ್ಷಣಿಕ ಪ್ರಶ್ನೆಗಳು ಆಲೋಚನೆಗೆ ಬಂದಾಗ ಅವು ಸ್ಥಾಯೀ ತತ್ತ್ವಗಳನ್ನು ರಂಗಕ್ಕೆಳೆದುಕೊಳ್ಳುವುದುಂಟು. ತತ್ತ್ವದ ಸ್ವರೂಪ ನಮಗೆ ಮನದಟ್ಟುವುದು ಅಂಥಾ ಪ್ರಯೋಗ ಸಂದರ್ಭದಲ್ಲಿ. ಈ ಕಾರಣದಿಂದ, ಒಂದು ದಿನದ ಮಟ್ಟಿಗೆ, ಒಂದು ವಾರದ ಮಟ್ಟಿಗೆ ಬಾಳಿಹೋಗುವ ವಾರ್ತಾ ಪ್ರತ್ರಿಕೆಯ ಲೇಖನಕ್ಕೂ ಒಂದೊಂದು ಸಾರಿ ಬಹುಕಾಲದ ಬೆಲೆ ಬರುವುದುಂಟು. ತತ್ತ್ವಕ್ಕೆ ಅಲ್ಲಿ ನಿದರ್ಶನವಿರುತ್ತದೆ. ಇಂಥ ನಂಬಿಕೆಯಿಂದ ಆಗಿರುವುದು ಈ ಸಂಕಲನ. ಇದು ಶಾಸ್ತ್ರಗ್ರಂಥವಲ್ಲ. ಆದದ್ದರಿಂದ ವಿಷಯ ಪ್ರತಿಪಾದನೆಯಲ್ಲಿ ಒಂದು ಆದ್ಯಂತ ಕ್ರಮವಾಗಲಿ ಸಮಗ್ರತೆಯಾಗಲಿ ಇಲ್ಲಿ ಕಾಣಬಾರದು. ವಾಕ್ಯಶೈಲಿಯಲ್ಲಿಯೂ ಇದು ಶಾಸ್ತ್ರದ ಬಿಗಿತಕ್ಕಿಂತ ಜನ ಸುಲಭವಾದ ಲಘುತೆಯನ್ನು ಉದ್ದೇಶಿಸಿಕೊಂಡಿದೆ. ಪಾರಿಭಾಷಿಕ ಪದಗಳ ಅರ್ಥವನ್ನು ವಿಶದಪಡಿಸುವುದಕ್ಕೋಸ್ಕರವೂ ಬೇಸರಕಳೆಯುವುದಕ್ಕೋಸ್ಕರವೂ ಇಲ್ಲಿ ಒಂದೇ ಶಾಸ್ತ್ರೀಯ ಶಬ್ದಕ್ಕೆ ಎರಡು ಮೂರು ಪರ್ಯಾಯ ಪದಗಳನ್ನು ಬಳಸಿಕೊಂಡಿದೆ: ಉದಾಹರಣೆಗಾಗಿ “ವೋಟ್‍” (Vote) ಎಂಬ ಇಂಗ್ಲಿಷ್‍ ಮಾತಿಗೆ “ಮತಾಂಕ”, “ಇಷ್ಟಮುದ್ರೆ” ಎಂದು ಮೊದಲಾದ ಎರಡು ಮೂರು ಸಮಾನ ಪದಗಳನ್ನು ಉಪಯೋಗಿಸಿದೆ. ನಮ್ಮ ಭಾಷೆಯಲ್ಲಿ ವಾಕ್ಸೌಕರ್ಯ ಹೆಚ್ಚಬೇಕಾದರೆ ಜನಕ್ಕೆ ಹೀಗೆ ನೂತನ ಪದ ಪರಿಚಯ ಆಗತ್ತಿರಬೇಕು. ಈ ಮೇಲೆ ಹೇಳಿರುವ ಮಾತುಗಳು ಇದೇ ಪ್ರಸಂಗ ಸರಣಿಯಲ್ಲಿ ಇನ್ನು ಮುಂದೆ ಪ್ರಕಟವಾಗುವ ಲೇಖನಗಳಿಗೂ ಅನ್ವಯಿಸುತ್ತವೆ. ಈ ಎಲ್ಲ ಲೇಖನಗಳೂ ಇಲ್ಲಿಯ ಲೇಖಕನ “ರಾಜ್ಯಶಾಸ್ತ್ರ” ಎಂಬ ಗ್ರಂಥಕ್ಕೆ ಅನುಬಂಧಗಳಂತೆ, ಅಥವಾ ಪರಿಶಿಷ್ಟ ಭಾಗಗಳಂತೆ ಇರುತ್ತದೆ. ರಾಜ್ಯ ವ್ಯವಸ್ಥೆಯಲ್ಲಿಯೂ ಜನತಾಭ್ಯುದಯದಲ್ಲಿಯೂ ಕುತೂಹಲವುಳ್ಳ ಮಹಾಶಯರು ಆ ಗ್ರಂಥವನ್ನೂ “ರಾಜ್ಯಾಂಗತತ್ತ್ವಗಳು” ಎಂಬ ಗ್ರಂಥವನ್ನೂ ಇದರೊಡನೆ ನೋಡಿದಲ್ಲಿ ಹೆಚ್ಚು ಪ್ರಯೋಜನವಾಗಬಹುದೆಂದು ತಲೆಬಾಗಿ ಬಿನ್ನಯಿಸುತ್ತೇನೆ.
ನಮ್ಮ ಪೂರ್ವಿಕರು ಮಕ್ಕಳಿಗೆ ಹೆಸರಿಡುವುದರಲ್ಲಿ ಒಂದು ವಿಶೇಷ ಪದ್ಧತಿಯನ್ನಿಟ್ಟುಕೊಂಡಿದ್ದರು. ಮೊದಲ ಎರಡು ಮೂರು ಮಕ್ಕಳು ಕಳೆದುಹೋಗಿದ್ದರೆ, ಮೂರನೆದಕ್ಕೋ ನಾಲ್ಕನೆಯದಕ್ಕೋ ಗುಂಡಪ್ಪ, ಕಲ್ಲಪ್ಪ, ತಿಪ್ಪಯ್ಯ, ಹುಚ್ಚಯ್ಯ- ಎಂದು ಹೆಸರು ಕೊಡುತ್ತಿದ್ದರು. ಅದರ ಭಾವ ಆ ಮಗುವಾದರೂ ಎಲ್ಲಾದರೂ ಗುಂಡುಕಲ್ಲಿನಂತೆ, ತಿಪ್ಪೆಯ ರಾಶಿಯಂತೆ, ಆಯುಸ್ಸುಂಟಾಗಿ ಬಾಳಿಕೊಳ್ಳಲಿ-ಎಂದು. ಈ ಗ್ರಂಥ ಮೊದಲು ಪ್ರಕಟವಾದಾಗ ಇದ್ದ ಮನೋಭಾವ ಅಂಥಾದ್ದು. ಇದು ಪಂಡಿತರನ್ನೂ ಪ್ರಸಿದ್ಧರನ್ನೂ ಪುಷ್ಟರನ್ನೂ ಉದ್ದೇಶಿಸಿದ್ದಲ್ಲ. ಬಹುಸಾಮಾನ್ಯರಾದವರ ಮನೆಯ ಬೆಳಕಿಗೆ ಇದು ಒಂದು ತೊಟ್ಟಿನಷ್ಟು ಎಣ್ಣೆಯಂತಾದರೆ ನನಗೆ ತೃಪ್ತಿ. ಕಗ್ಗ ಜೀವನದ ಆಳವಾದ ಪ್ರಶ್ನೆಗಳನ್ನು ಪರಿಶೋಧಿಸುತ್ತದೆ, ನಿರಂತರವಾಗಿ ಬದಲಾಗುವ ಜಗತ್ತಿನಲ್ಲಿ ಸಮತೋಲಿತ ಜೀವನವನ್ನು ಮುನ್ನಡೆಸಲು ನಮಗೆ ಸಲಹೆ ನೀಡುತ್ತದೆ. ಆದ್ದರಿಂದ, ಕಗ್ಗದ ಅನೇಕ ಪದ್ಯಗಳ ಸಂದೇಶವು ”ಸಮತ್ವ” ಆಗಿದೆ.
ಈ ಲೇಖನಗಳು ಆಯಾ ವ್ಯಕ್ತಿಯ ಜೀವನಚರಿತ್ರೆಯಲ್ಲ; ಯೋಗ್ಯತಾ ನಿರ್ಣಯವೂ ಅಲ್ಲ. ಆಯಾ ವ್ಯಕ್ತಿಯ ವಿಷಯದಲ್ಲಿ ನನ್ನ ಮನಸ್ಸು ಗ್ರಹಿಸಲಾದಷ್ಟನ್ನು, ಅದರಲ್ಲಿ ನನ್ನ ನೆನೆಪು ಉಳಿಸಿಕೊಟ್ಟಷ್ಟನನ್ನು, ಲಿಖಿತ ಮಾಡುವುದಷ್ಟೇ ನನ್ನ ಪ್ರಯತ್ನ. ನನಗೆ ತೋರಿದ್ದೇ ಪೂರ್ಣವಲ್ಲ ; ನನ್ನ ಅಭಿಪ್ರಾಯವೇ ತೀರ್ಮಾನವಲ್ಲ. ಬೇರೆ ಅನುಭವಗಳೂ ಬೇರೆ ಅಭಿಪ್ರಾಯಗಳೂ ನಾಲ್ಕಾರಿದ್ದಾವು, ಸಾಧ್ಯವಿರುವ ಹತ್ತು ದೃಷ್ಟಿಗಳಲ್ಲಿ ನನ್ನ ದೃಷ್ಟಿಯೂ ಒಂದು. ನಮ್ಮ ದೇಶದಲ್ಲಿ ಸಾರ್ವಜನಿಕ ವಿಚಾರಗಳಲ್ಲಿ ನಡೆಯುತ್ತಿರುವ ಪ್ರಮಾದಗಳಿಗೆ ಚರಿತ್ರೆಯ ಅಪರಿಚಯವೇ ಮುಖ್ಯ ಕಾರವವೆಂದು ಹೇಳಬಹುದು. ಚರಿತ್ರೆಯೆಂದರೆ ಒಂದು ಪ್ರಶ್ನೆಯ ಹಿನ್ನೆಲೆ. ಆ ಪ್ರಶ್ನೆ ಹೇಗೆ ಹುಟ್ಟಿತು. ಹಿಂದಿನವರು ಆ ಪ್ರಶ್ನೆಯನ್ನು ಹೇಗೆ ಎದುರಿಸಿದರು, ಅವರ ನಡವಳಿಕೆಯಲ್ಲಿ ಇದ್ದ ಮನೋಗತವೇನು, ಆ ನಡವಳಿಕೆ ವ್ಯರ್ಥವಾದದ್ದಕ್ಕೆ ಕಾರಣಗಳೇನು - ಇಂಥ ಅನುಭವ ಪರೀಕ್ಷೆಯೇ ಚರಿತ್ರೆ. ಚರಿತ್ರೆಯನ್ನು ಒಳಹೊಕ್ಕು ವಿಮರ್ಶಿಸಿದರೆ ಹಿಂದೆ ಮಾಡಿದ ತಪ್ಪೇನು ಎಂದು ನಮಗೆ ಎಚ್ಚರಿಕೆ ದೊರೆಯುತ್ತದೆ. ಈಗ ನಾವು ಅಂಥ ತಪ್ಪನ್ನು ಮಾಡದಿರಲು ಯಾವ ಎಚ್ಚರಿಕೆ ಅವಶ್ಯ, ನಾವು ಯಾವ ಹೊಸ ನೀತಿಯನ್ನು ಅವಲಂಬಿಸಿದರೆ ಹಳೆಯ ಅಪಾಯ ನಮಗೆ ತಪ್ಪೀತು ? - ಈ ವಿಧವಾದ ಜಾಗ್ರತೆ ಮತ್ತು ಬೋಧನೆ ನಮಗೆ ಚರಿತ್ರೆಯ ವಿಮರ್ಶನೆಯಿಂದ ಆಗಬಹುದಾದ ಉಪಕಾರ.
ಇಂಡಿಯ ದೇಶದಲ್ಲಿ ವಿಗ್ರಹಶಿಲ್ಪಕ್ಕೆ ಹೆಸರಾಗಿರುವ ದೇವಲಯಗಳಲ್ಲಿ ಬೇಲೂರಿನದು ಮೊದಲಪಂಕ್ತಿಯದು,—ಮೊದಲನೆಯದು ಎಂದೂ ಹೇಳಬಹುದು. ಬೇಲೂರು ನಮ್ಮ ದೇಶದ ಪೂರ್ವಚರಿತ್ರೆಯಲ್ಲಿ ಅತ್ಯಂತ ಸ್ಮರಣೀಯವಾದ ಪಟ್ಟಣಗಳ ಪೈಕಿ ಒಂದು. ಅದು ಕೆಲವು ಶತಮಾನಕಾಲ ಹೊಯ್ಸಳರ ರಾಜಧಾನಿಯಾಗಿತ್ತು. ಹೊಯ್ಸಳ ರಾಜರುಗಳಲ್ಲಿ ಅತ್ಯಂತ ಪ್ರಸಿದ್ಧನಾದವನು ವಿಷ್ಣುವರ್ಧನ. ಆತ ಬಹು ಪರಾಕ್ರಮಶಾಲಿ; ತನ್ನ ರಾಜ್ಯವನ್ನು ಎಲ್ಲ ದಿಕ್ಕುಗಳಲ್ಲಿಯೂ ವಿಸ್ತರಿಸಿದ್ದವನು. ರಣರಂಗದಲ್ಲಿ ಆತನು ಹೇಗೆ ಜಯಶಾಲಿಯಾದವನೋ ರಾಜ್ಯಪಾಲನೆಯಲ್ಲಿಯೂ ಹಾಗೆ ಕೃತಸಂಕಲ್ಪನಾದವನು. ತಾನು ಸರಸ ಕಲಾಪ್ರಿಯನಾಗಿ, ತನ್ನ ಜನ ನಗುಮುಖದಿಂದ ನಲಿಯುವುದನ್ನು ನೋಡಬೇಕೆಂದು ಪರಿಶ್ರಮಿಸುತ್ತಿದ್ದವನು. ವಿಷ್ಣುವರ್ಧನನು ಕಟ್ಟಿಸಿದ ದೇವಾಲಯಗಳಲ್ಲಿ ಐದು ನಾರಾಯಣ ದೇವಾಂಕಿತವೆಂದು ಲೋಕದ ಹೇಳಿಕೆ. ಇವುಗಳಲ್ಲಿ ಐದನೆಯದು ಬೇಲೂರಿನ ದೇವರ ಹೆಸರು. ಅದೇ ದೇವರಿಗೆ ಸೌಮ್ಯನಾರಾಯಣನೆಂದೂ ಚೆನ್ನಕೇಶವನೆಂದೂ ಹೆಸರುಗಳು ರೂಢಿಯಾಗಿವೆ. ಈ ದೇವಸ್ಥಾನದ ಮುಖ್ಯ ವೈಶಿಷ್ಟ್ಯ ಅದರ ವಿಗ್ರಹಶಿಲ್ಪವೆಂದು ಮೊದಲೇ ಸೂಚಿಸಿದ್ದಾಗಿದೆ. ಶಿಲ್ಪದಲ್ಲಿ ವಾಸ್ತುಶಿಲ್ಪ, ವಿಗ್ರಹಶಿಲ್ಪ, ಯಂತ್ರಶಿಲ್ಪ ಮೊದಲಾದ ಅನೇಕ ವಿಭಾಗಗಳುಂಟಷ್ಟೆ ? ಅವುಗಳಲ್ಲಿ ವಾಸಗೃಹದ ನಿರ್ಮಾಣಕ್ಕೆ ಸಂಬಂಧಪಟ್ಟದ್ದು ವಾಸ್ತುಶಿಲ್ಪ (ಆರ್ಕಿಟೆಕ್ಚರ್‍), ಇದರಲ್ಲಿ ಕಲಾಂಶಕ್ಕಿಂತ ಉಪಯೋಗಾಂಶ ಹೆಚ್ಚಿನದು. ಕಲೆಯೆಂದರೆ ಸೌಂದರ್ಯ ಕಲ್ಪನೆ. ಈ ಕಟ್ಟಡದ ಸೊಬಗು ಇಷ್ಟಿದ್ದರೂ ಅದರ ವಿಶೇಷವಾದ ಆಕರ್ಷಣೆ ಅದರ ಪ್ರತಿಮೆಗಳದು. ಆ ಚಿತ್ರಸೌಂದರ್ಯವನ್ನು ಬರಿಯ ಮಾತುಗಳ ಮೂಲಕ ಕಾಣಿಸಲಾದೀತೆಂದಾಗಲಿ ಕಂಡುಕೊಳ್ಳಬಹುದೆಂದಾಗಲಿ ಯಾರಾದರೂ ಭಾವಿಸಿದ್ದರೆ ಅವರು ಭ್ರಾಂತರು. ಪ್ರತ್ಯಕ್ಷ ದರ್ಶನದಿಂದ ಸಾಧ್ಯವಾದ ಅನುಭವವು ವಾಙ್ಮಯ ವರ್ಣನೆಗೆ ಸಾಧ್ಯವಾಗುವ ಹಾಗಿದ್ದರೆ, ಆ ದೃಶ್ಯದಲ್ಲಿ ಅತಿಶಯದ ಸಂಗತಿಯೇನೂ ಇರದೆಂದೇ ಅರ್ಥ. ಯಥಾವತ್ತಾದ (ಫೋಟೋಗ್ರಾಫ್‍) ಛಾಯಾಬಿಂಬದಿಂದ ಸಹ ದೊರೆಯತಕ್ಕದ್ದಲ್ಲ ಆ ಸೌಂದರ್ಯಾನುಭವ. ಹೀಗಿದ್ದರೂ ಈ ಉಪನ್ಯಾಸದ ಉದ್ದೇಶ ನೆರವೇರಬೇಕಾದರೆ ವರ್ಣನೆಯ ಪ್ರಯತ್ನ ನನ್ನಿಂದ ಒಂದಷ್ಟು ಆಗಬೇಕಾಗಿದೆ.
ಈ ನಾಟಕದ ಕಥೆ ಈಗ್ಗೆ (೧೯೪೧) ಆರುನೂರು ವರ್ಷಗಳಷ್ಟು ಹಳೆಯದು. ಅದು ಕಟ್ಟು ಕಥೆಯಲ್ಲ; ಚರಿತ್ರೆಯ ಆಧಾರವುಳ್ಳದ್ದು. ಮಾನವ ಪ್ರಪಂಚದಲ್ಲಿಯ ಯಾವ ಒಂದು ಪದಾರ್ಥದ ಅಥವಾ ವ್ಯಾಪಾರದ ಸ್ವರೂಪವನ್ನು ಚೆನ್ನಾಗಿ ತಿಳಿಯಬೇಕಾದರೂ ಅದನ್ನು ಎರಡು ಕಡೆಗಳಿಂದ ನೋಡಬೇಕು: (೧) ಹೊರಗಿನಿಂದ, (೨) ಒಳಗಿನಿಂದ. ಭರತಖಂಡದ ಪೂರ್ವಚರಿತ್ರೆಗೆ ಸಂಬಂಧಪಟ್ಟ ಮಹಾಸಮಾರಂಭಗಳ ವಿಷಯದಲ್ಲಿ ಇಂಥ ವಿವರಗಳನ್ನು ತಿಳಿದುಕೊಳ್ಳಲು ಸಾಧನಗಳು ಸಾಲವು. ವಿದ್ಯಾರಣ್ಯರಿಗಿದ್ದ ಅಂತರ್ಭಾವಗಳೆಂಥವು, ಅವರು ತಮ್ಮ ಶಿಷ್ಯರಿಗೆ ಮಾಡಿದ ಉಪದೇಶಗಳೆಂಥವು, ಹರಿಹರ ಬುಕ್ಕರು ಮಾಡಿದ ಆಲೋಚನೆಗಳೆಂಥವು, ಆ ಕಾಲದ ಜನರಿಗಿದ್ದ ಆಶೆ ಆಶಯಗಳೆಂಥವು—ಇವುಗಳನ್ನೆಲ್ಲ ತಿಳಿಸುವ ಪ್ರತ್ಯಕ್ಷ ಪ್ರಮಾಣಗಳಾವುವೂ ಇದುವರೆಗೆ ನಮಗೆ ದೊರೆತಿಲ್ಲ. ಈ ವಿವರಗಳನ್ನು ನಾವು ಅನುಮಾನಿಸಿ, ಅಥವಾ ಊಹಿಸಿ, ಮನಸ್ಸಿಗೆ ಗೋಚರಪಡಿಸಿಕೊಳ್ಳಬೇಕಾಗಿದೆ. ಈ ಪುಸ್ತಕವನ್ನು ಬರೆದಂದಿನಿಂದ ಇದುವರೆಗೆ (೧೯೪೧) ಆಗಿರುವ 20 - 24 ವರ್ಷಗಳೊಳಗೆ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಯುಗ ಬದಲಾಯಿಸಿದೆ. ಕಾವ್ಯ ನಾಟಕಗಳ ವಸ್ತು, ಪಾಕ, ಶೈಲಿ, ಧಾಟಿ—ಇವೆಲ್ಲವೂ ಹೊಸ ಹೊಸದಾಗುತ್ತಿವೆ. ಈ ನೂತನ ಕೃತಿಗಳ ನಡುವೆ ಹಳೆಯ ತೀರಿನ “ವಿದ್ಯಾರಣ್ಯ ವಿಜಯ”ವು ಈ ಕಾಲದ ಕಾಲೇಜು ವಿದ್ಯಾರ್ಥಿನಿಯರ ನಡುವೆ ಕುಳಿತ ಹಳೆಯಕಾಲದ ಮುತ್ತೈದೆಯನ್ನು ಹೋಲುತ್ತದೆ. ಜಾರ್ಜೆಟ್‍ ಸೀರೆಯ ಹೊಳಪು ನುಣುಪುಗಳು ದೊಮ್ಮಸಂದ್ರದ ಹಳೆ ಮಗ್ಗಕ್ಕೆ ಅಪರಿಚಿತವಾದುವು. ಲೋಲಕಿನ ಥಾಳಥಳ್ಯ ಬುಗಡಿಗೆ ಬರಲಾರದು. ಮುದಿ ಮುತ್ತೈದೆಯನ್ನು ಎಂದಾದರೊಂದು ದಿನ ಕರೆದು ಸೋಬಾನೆ ಹೇಳಿಸಬೇಕೆನ್ನುವವರು ಇನ್ನೂ ಇದ್ದಾರೆಂಬುದು ಈಗ ಆಕೆಗಿರುವ ಸಮಾಧಾನ; ತನಗೆ ನಾಜೂಕೇನೂ ತಿಳಿಯದೆಂಬುದು ಆಕೆಗಿರುವ ಸಂಕೋಚ. ಎರಡೂ ಇದ್ದುಕೊಳ್ಳಲಿ. (“ಮ್ಮೂಸಿಯಮ್‍” ಎನ್ನುವ) ಪ್ರಾಚೀನ ಕಲಾ ಪ್ರದರ್ಶನ ಶಾಲೆಯಲ್ಲಂತೂ ಆಕೆಯಂಥವರಿಗೆ ಒಂದು ಜಾಗವುಂಟು.
ಮೈಸೂರು ಸಂಸ್ಥಾನದಲ್ಲಿ ಸಮಸ್ತರಲ್ಲಿಯೂ ಈಚೆಗೆ ಸ್ವದೇಶೋನ್ನತಿಯ ಚಿಂತೆಯು ಹೆಚ್ಚಾಗಿ ತಲೆದೋರುತ್ತಿದೆಯಷ್ಟೆ. “ಇದು ನಮ್ಮ ರಾಜ್ಯ, ಇದರ ಏಳಿಗೆಯೂ ನಮ್ಮ ಸ್ವಂತ ಏಳಿಗೆಯೂ ಅಭೇದ್ಯವಾಗಿ ಸಂಬಂಧಪಟ್ಟಿವೆ. ದೇಶಾಭಿವೃದ್ಥಿಯ ಕಾರ್ಯಗಳು ತೃಪ್ತಿಕರವಾಗಿ ನಡೆದ ಹೊರತು ನಮ್ಮ ಅಭಿವೃದ್ಧಿಯು. ನಿಜವಾಗಿ ಆಗಲಾರದು” – ಎಂಬ ಭಾವನೆಯು ಜನರಲ್ಲಿ ಈಗ ವಿಶೇಷವಾಗಿ ಹರಡಿಯೂ ಹರಡುತ್ತಲೂ ಇದೆ. ಇದಕ್ಕೆ ಶ್ರೀಮನ್ಮಹಾರಾಜರವರೂ, ಅವರ ಸರ್ಕಾರದವರೂ ತೋರುತ್ತಿರುವ ಪ್ರಜಾಭಿಮಾನವೇ ಕಾರಣವೆಂಬುದರಲ್ಲಿ, ಸಂಶಯವಿಲ್ಲ. ಲೆಜಿಸ್ಲೇಟಿವ್‍ ಕೌನ್ಸಿಲ್‍ ಮುಂತಾದ ರಾಜಕೀಯ ಸಭೆಗಳಲ್ಲಿಯೂ, ಇತರ ಮಾರ್ಗಗಳಲ್ಲಿಯೂ ಪ್ರಜಾಪ್ರಮುಖರು ಮುಂದಕ್ಕೆ ಬಂದು, ದೇಶಸೇವೆ ಮಾಡಲು ಅವಕಾಶಗಳುಂಟಾಗಿರುವುದರಿಂದಲೂ, ಪ್ರಜಾಭಿಪ್ರಾಯಕ್ಕೆ ಈಗ ಗೌರವವು ಹೆಚ್ಚಿರುವುದರಿಂದಲೂ, ದೇಶಾಭ್ಯುದಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಸರಿಯಾಗಿ ತಿಳಿದುಕೊಳ್ಳುವುದು ಸರ್ವರಿಗೂ ಕರ್ತವ್ಯವಾಗಿದೆ. ಪ್ರಕೃತ ಸ್ಥಿತಿಯನ್ನು ವಿಚಾರಿಸದೆಯೇ ಪುರೋಭಿವೃದ್ಧಿಯ ಮಾರ್ಗಗಳನ್ನು ನಿಶ್ಚಯಿಸುವುದು ಸುಲಭವಲ್ಲ. ಪ್ರಕೃತ ಸ್ಥಿತಿಯನ್ನು ಸಾಧ್ಯವಾದಷ್ಟು ವಿಶದವಾಗಿ ತಿಳಿಸಬೇಕೆಂಬುದೇ ಈ ಪುಸ್ತಕದ ಉದ್ದೇಶ್ಯ. ವಿಷಯಾನುಕ್ರಮಣಿಕೆಯನ್ನು ನೋಡುವುದರಿಂದ ಇದರಲ್ಲಿ ಎಷ್ಟು ಬಗೆಯ ವಿಷಯಗಳು ಸಂಗ್ರಹಿಸಲ್ಪಟ್ಟಿವೆಯೆಂಬುದು ಗೋಚರವಾಗುವುದು.
...ಈ ಪದ್ಯಗಳನ್ನು ‘ಪ್ರಬುದ್ಧ ಕರ್ಣಾಟಕ’ ಪತ್ರಿಕೆಯಲ್ಲಿ ಪ್ರಕಟಪಡಿಸಿರುವುದಕಾನನಗೆ ತ್ಸಾಹ ಸಹಯಗಳನ್ನು ಕೊಟ್ಟಿರುವುದಕ್ಕಾಗಿ ಅವರಲ್ಲೊಬ್ಬರಾದ ನನ್ನ ಮಿತ್ರರು ಶ್ರೀಮಾನ್‍ ಎ. ಆರ್‍. ಕೃಷ್ಣಶಾಸ್ತ್ರಿಗಳವರಿಗೆ ನನ್ನ ಮನಃಪೂರ್ವಕವಾದ ವಂದನೆಗಳು ವಿಶೇಷವಾಗಿ ಸಲ್ಲತಕ್ಕುವಗಿವೆ. ಈ ಪುಸ್ತಕದ ವಿಶೇಷ ಆಕರ್ಷಣೆಯು ಇದರ ಚಿತ್ರಗಳ ಸೌಂದರ್ಯದಲ್ಲಿರತಕ್ಕುದು. ಕರ್ಣಾಟಕ ಶಿಲ್ಪವೈಭವ ಪ್ರಕಾಶಕರೂ ನನ್ನ ಮಿತ್ರರೂ ಆದ ಶ್ರೀಮಾನ್‍ ಬಿ. ವೆಂಕೋಬರಾಯರವರು ಉಮರನ ಭಾವಚಿತ್ರವನ್ನೂ ಮುಖಪತ್ರದ ಅಲಂಕಾರ ಚಿತ್ರವನ್ನೂ ತಯಾರುಮಾಡಿಕೊಟ್ಟಿದ್ದಾರೆ. ಬೊಂಬಾಯಿ ಪಟ್ಟಣದ “ಟೈಮ್ಸ್‍ ಆಫ್‍ ಇಂಡಿಯ” (The Times of India) ಎಂಬ ಪ್ರಸಿದ್ಧ ಇಂಗ್ಲಿಷ್‍ ವೃತ್ತಪತ್ರಿಕೆಯ ಅಧಿಪತಿಗಳು ತಮ್ಮ ಸುಂದರವಾದ ವಾರ್ಷಿಕ ಸಂಚಿಕೆಗಳಲ್ಲಿ ಪ್ರಚುರವಾಗಿರುವ ಚಿತ್ರಪಟಗಳನ್ನು ಉಪಯೋಗಿಸಿಕೊಳ್ಳಲು ಅನುಮತಿಕೊಟ್ಟಿದ್ದಾರೆ....
ವಾಚಕರಿಗೆ ಈ ಪುಸ್ತಕದಲ್ಲಿ ಇಲ್ಲಲ್ಲಿ ಚರ್ವಿತಚರ್ವಣದ ಅನುಭವವಾಗಬಹುದು. ಈ ಉಪನ್ಯಾಸಗಳು ಅನೇಕ ಸಂದರ್ಭಗಳಲ್ಲಿ ಅನೇಕ ವಿಧದ ಗೋಷ್ಠಿಗಳಿಗೆ ಕೊಟ್ಟವಾದ ಕಾರಣ, ಮುಖ್ಯಾಭಿಪ್ರಾಯಗಳು ಆಗಾಗ ಪುನರುಕ್ತವಾಗಿರುವುದು ಸ್ವಾಭಾವಿಕ. ಪುನರುಕ್ತಿಗಳನ್ನೆಲ್ಲ ತೆಗೆದುಹಾಕುವ ಪ್ರಯತ್ನ ಮಾಡಿದ್ದಿದ್ದರೆ ಉಪನ್ಯಾಸಧೋರಣೆಯ ನೈಜತೆಗೆ ಊನವಾಗುತ್ತಿತ್ತೇ ಹೊರತು ಗುಣವೇನೂ ಉಂಟಾಗುತ್ತಿರಲಿಲ್ಲ. ಅದಕ್ಕೆ ಬದಲಾಗಿ ಹೊಸದಾಗಿಯೇ ಬರವಣಿಗೆ ಆಗಬೇಕಾಗುತ್ತಿತ್ತು. ಅದಕ್ಕೆ ಬೇಕಾದ ಬಿಡುವು ನನಗಿಲ್ಲ; ಮತ್ತು ಹೊಸಗ್ರಂಥ ಉದ್ದಿಷ್ಟವಾದದ್ದೂ ಅಲ್ಲ. ವಾಚಕರು ನನ್ನ ಈ ಸಂದರ್ಭವನ್ನರಿತು, ಸಹನೆ ತೋರಬೇಕೆಂದು ಬೇಡುತ್ತೇನೆ. ಸಾಹಿತ್ಯದ ಉಪಕಾರ ಮನೋರಂಜನೆ ಮಾತ್ರವಲ್ಲ; ಅದು ಜೀವನ ಪ್ರಯುಕ್ತವಾದ ಒಂದು ಶಕ್ತಿ–ಮಹಾಶಕ್ತಿ, ಎಂಬುದು ಈ ಗ್ರಂಥದ ಮುಖ್ಯಾಶಯ. ಸಾಹಿತ್ಯಶಕ್ತಿಗೆ ನಿದರ್ಶನಸ್ವರೂಪವಾದ ವಾಲ್ಮೀಕಿ ವ್ಯಾಸರ ಭಾವಚಿತ್ರಗಳ ಜೊತೆಗೆ ಸಾಹಿತ್ಯಶಕ್ತಿಯಿಂದ ಪ್ರೇರಿತನಾಗಿ ಇಂಗ್ಲೆಂಡಿನ ರಾಜ್ಯನಿರ್ವಾಹಮಾಡಿ ಜಗತ್ಪ್ರಸಿದ್ಧನಾದ ಗ್ಲ್ಯಾಡ್‍ಸ್ಟನ್ನಿನ ಭಾವಚಿತ್ರವನ್ನು ಈಗ ಹೊಸದಾಗಿ ಸೇರಿಸಿದೆ. ‘ಸಾಹಿತ್ಯಶಕ್ತಿ’ ಎಂದರೆ ‘ಶಾಸ್ತ್ರದ ಆಸಕ್ತಿ’ ಎಂದು ಯಾರೂ ಅರ್ಥ ಮಾಡಲಾರರು. ವಿಜ್ಞಾನಾದಿಶಾಸ್ತ್ರಗಳು ನಮ್ಮ ದೇಶದಲ್ಲಿ ಅಭಿವೃದ್ಧಿ ಪಡೆಯಬೇಕೆಂದು ಆಶೆಪಟ್ಟುಕೊಂಡಿರುವವರಲ್ಲಿ ನಾನೂ ಒಬ್ಬ.
“ನನ್ನ ಜ್ಞಾಪಕ ಚಿತ್ರಶಾಲೆ” ಯ ಸಂಪುಟಗಳಲ್ಲಿ ಇದು, ಇಂದಿನ ದೇಶಪರಿಸ್ಥಿತಿಯಲ್ಲಿ, ಮಿಕ್ಕ ಸಂಪುಟಗಳಿಗಿಂತ ಕೊಂಚ ಹೆಚ್ಚು ತುರ್ತಿನದೆಂದು ನನಗನ್ನಿಸಿದೆ. ಏಕೆಂದರೆ ಇದರ ವಿಷಯವು ರಾಜಕೀಯ. ನಮ್ಮ ರಾಜಕೀಯವು ಹದಕ್ಕೆ ಬಂದಲ್ಲದೆ ನಮ್ಮ ದೇಶ ಜೀವನದ ಯಾವ ಅಂಶವೂ ಹದಕ್ಕೆ ಬರಲಾರದೆಂದು ನನ್ನ ನಂಬಿಕೆ. ನಮಗೆ ತಕ್ಕ ರಾಜ್ಯಕ್ರಮವೆಂಥಾದ್ದೆಂಬುದನ್ನು ನಾವು ಇನ್ನೂ ಕಂಡುಕೊಳ್ಳಬೇಕಾಗಿದೆ. ಆ ಪ್ರಶ್ನೆಯನ್ನು ವಿಚಾರ ಮಾಡಲಿಚ್ಛಿಸುವವರಿಗೆ ಉಪಯುಕ್ತವಾಗಬಹುದಾದ ಸಾಮಗ್ರಿ ಈ ಪುಸ್ತಕದಲ್ಲಿ ಒಂದಷ್ಟು ಇದ್ದೀತು. ಈ ಗ್ರಂಥದಲ್ಲಿ ದಿವಾನ್ ರಂಗಾಚಾರ್ಯರಿಂದ ನ್ಯಾಪತಿ ಮಾಧವರಾಯರವರೆಗೆ ಮೈಸೂರಿನ ರಾಜ್ಯಾಡಳಿತವನ್ನು ನಡಸಿದ ದಿವಾನರುಗಳ ಗುಣಶೀಲಗಳ, ಆಡಳಿತ ನೀತಿಗಳ ಚಿತ್ರಣವಿದೆ. ಅವರ ಆಡಳಿತದ ಗುರಿಯೇನಾಗಿತ್ತು, ಅವರ ಕಾಲದಲ್ಲಿ ಪ್ರಜೆಗಳು ನೆಮ್ಮದಿಯಿಂದ ಇದ್ದರೆ, ಇಂದಿನ ಸ್ಥಿತಿ ಏನಾಗಿದೆ ಎಂಬುದನ್ನು ವಿವೇಚಿಸುವ, ಜನಮನವನ್ನು ಪ್ರಚೋದಿಸುವ ಪೀಠಿಕಾ ಉಪಸಂಹಾರ ರೂಪವಾದ ಪ್ರಬಂಧಗಳೂ ಇವೆ.
‘ತಿಲೋತ್ತಮೆ’ ನಾಟಕದ ಮೂಲ ಭಾಗ ಪ್ರಕಟವಾದದ್ದು ಕರ್ಣಾಟಕ ಸಾಹಿತ್ಯ ಪರಿಷತ್ಪತ್ರಿಕೆಯ ೧೯೨೧ರ ಏಪ್ರಿಲ್‍ ತಿಂಗಳ ಸಂಚಿಕೆಯಲ್ಲಿ : ಆಗ ಅದರ ಸಂಪಾದಕರಾಗಿದ್ದ ಕೀರ್ತಿಶೇಷ ಪ್ರೊ ॥ ಬೆಳ್ಳಾವೆ ವೆಂಕಟನಾರಣಪ್ಪನವರ ಪ್ರೇರಣೆ-ಪ್ರೋತ್ಸಾಹಗಳಿಂದ. ಅವರು ಅದನ್ನು ಮೆಚ್ಚಿಕೊಂಡಿದ್ದರೆಂದು ಸ್ವತಃ ವ್ಯಕ್ತವಾಗುತ್ತದೆ. ಅವರ ಮೆಚ್ಚಿಕೆ ನನಗೆ ಒಂದು ಭಾಗ್ಯ. ಆಗ ಪರಿಷತ್ತಿನ ಪಂಡಿತರಾಗಿದ್ದ ವೇ ॥ ತೋಗೆರೆ ನಂಜುಡಶಾಸ್ತ್ರಿಗಳು ಮತ್ತು ವೇ ॥ ಕಡಬದ ನಂಜುಂಡಶಾಸ್ತ್ರಿಗಳು ಇದನ್ನು ಒಪ್ಪಿಕೊಂಡಿದ್ದರು. ಇದು ನನಗೆ ಸಂತೋಷದ ವಿಷಯವೇ. ಇದಕ್ಕಿಂತ ಮುಖ್ಯವಾಗಿ, ಮಿತ್ರರಾದ ಟಿ.ಪಿ. ಕೈಲಾಸಂ ಅವರು ಈ ಕೃತಿಯಲ್ಲಿ ಏನೋ ಸ್ವಾರಸ್ಯವನ್ನು ಕಂಡು ಅದನ್ನು ಪದೇ ಪದೇ ಉದಾಹರಿಸುತ್ತಿದ್ದರು. ಹೀಗೆ ಇದಕ್ಕೊಂದು ಬೆಲೆ ಬಂತು. ಆದರೆ, ಈಗಿನ ಕಾಲದಲ್ಲಿ, ಬಹು ವರ್ಷ ಕಳೆದ ಬಳಿಕ—ಇಂದಿನ ನವನಾಗರಿಕ ಮಹನೀಯರಿಗೆ ಈ ಹಳೆಯ ಕಾಲದ್ದು ಎಷ್ಟು ಮಾತ್ರ ಹಿಡಿಸೀತೋ ಹೇಳಲಾರೆ. ಅಲ್ಲೊಬ್ಬರು ಇಲ್ಲೊಬ್ಬರಿಗೆ ಒಪ್ಪಿತವಾಗಬಹುದೋ ಏನೋ!
©2019 GoogleSite Terms of ServicePrivacyDevelopersArtistsAbout Google|Location: United StatesLanguage: English (United States)
By purchasing this item, you are transacting with Google Payments and agreeing to the Google Payments Terms of Service and Privacy Notice.