ವಾರ್ತಾಪತ್ರಿಕೋದ್ಯೋಗ ನನ್ನ ಜೀವನ. ಅಂಥವನ ಕೈಗೆ ದೊರೆಯುವ ವಿಚಾರಗಳು ಆಯಾ ಕ್ಷಣಕ್ಕೆ ಮಾತ್ರ ಮುಖ್ಯವೆನಿಸಿದವು. ಅಂಥ ಕ್ಷಣಿಕ ಪ್ರಶ್ನೆಗಳು ಆಲೋಚನೆಗೆ ಬಂದಾಗ ಅವು ಸ್ಥಾಯೀ ತತ್ತ್ವಗಳನ್ನು ರಂಗಕ್ಕೆಳೆದುಕೊಳ್ಳುವುದುಂಟು. ತತ್ತ್ವದ ಸ್ವರೂಪ ನಮಗೆ ಮನದಟ್ಟುವುದು ಅಂಥಾ ಪ್ರಯೋಗ ಸಂದರ್ಭದಲ್ಲಿ. ಈ ಕಾರಣದಿಂದ, ಒಂದು ದಿನದ ಮಟ್ಟಿಗೆ, ಒಂದು ವಾರದ ಮಟ್ಟಿಗೆ ಬಾಳಿಹೋಗುವ ವಾರ್ತಾ ಪ್ರತ್ರಿಕೆಯ ಲೇಖನಕ್ಕೂ ಒಂದೊಂದು ಸಾರಿ ಬಹುಕಾಲದ ಬೆಲೆ ಬರುವುದುಂಟು. ತತ್ತ್ವಕ್ಕೆ ಅಲ್ಲಿ ನಿದರ್ಶನವಿರುತ್ತದೆ. ಇಂಥ ನಂಬಿಕೆಯಿಂದ ಆಗಿರುವುದು ಈ ಸಂಕಲನ. ಇದು ಶಾಸ್ತ್ರಗ್ರಂಥವಲ್ಲ. ಆದದ್ದರಿಂದ ವಿಷಯ ಪ್ರತಿಪಾದನೆಯಲ್ಲಿ ಒಂದು ಆದ್ಯಂತ ಕ್ರಮವಾಗಲಿ ಸಮಗ್ರತೆಯಾಗಲಿ ಇಲ್ಲಿ ಕಾಣಬಾರದು. ವಾಕ್ಯಶೈಲಿಯಲ್ಲಿಯೂ ಇದು ಶಾಸ್ತ್ರದ ಬಿಗಿತಕ್ಕಿಂತ ಜನ ಸುಲಭವಾದ ಲಘುತೆಯನ್ನು ಉದ್ದೇಶಿಸಿಕೊಂಡಿದೆ. ಪಾರಿಭಾಷಿಕ ಪದಗಳ ಅರ್ಥವನ್ನು ವಿಶದಪಡಿಸುವುದಕ್ಕೋಸ್ಕರವೂ ಬೇಸರಕಳೆಯುವುದಕ್ಕೋಸ್ಕರವೂ ಇಲ್ಲಿ ಒಂದೇ ಶಾಸ್ತ್ರೀಯ ಶಬ್ದಕ್ಕೆ ಎರಡು ಮೂರು ಪರ್ಯಾಯ ಪದಗಳನ್ನು ಬಳಸಿಕೊಂಡಿದೆ: ಉದಾಹರಣೆಗಾಗಿ “ವೋಟ್” (Vote) ಎಂಬ ಇಂಗ್ಲಿಷ್ ಮಾತಿಗೆ “ಮತಾಂಕ”, “ಇಷ್ಟಮುದ್ರೆ” ಎಂದು ಮೊದಲಾದ ಎರಡು ಮೂರು ಸಮಾನ ಪದಗಳನ್ನು ಉಪಯೋಗಿಸಿದೆ. ನಮ್ಮ ಭಾಷೆಯಲ್ಲಿ ವಾಕ್ಸೌಕರ್ಯ ಹೆಚ್ಚಬೇಕಾದರೆ ಜನಕ್ಕೆ ಹೀಗೆ ನೂತನ ಪದ ಪರಿಚಯ ಆಗತ್ತಿರಬೇಕು. ಈ ಮೇಲೆ ಹೇಳಿರುವ ಮಾತುಗಳು ಇದೇ ಪ್ರಸಂಗ ಸರಣಿಯಲ್ಲಿ ಇನ್ನು ಮುಂದೆ ಪ್ರಕಟವಾಗುವ ಲೇಖನಗಳಿಗೂ ಅನ್ವಯಿಸುತ್ತವೆ. ಈ ಎಲ್ಲ ಲೇಖನಗಳೂ ಇಲ್ಲಿಯ ಲೇಖಕನ “ರಾಜ್ಯಶಾಸ್ತ್ರ” ಎಂಬ ಗ್ರಂಥಕ್ಕೆ ಅನುಬಂಧಗಳಂತೆ, ಅಥವಾ ಪರಿಶಿಷ್ಟ ಭಾಗಗಳಂತೆ ಇರುತ್ತದೆ. ರಾಜ್ಯ ವ್ಯವಸ್ಥೆಯಲ್ಲಿಯೂ ಜನತಾಭ್ಯುದಯದಲ್ಲಿಯೂ ಕುತೂಹಲವುಳ್ಳ ಮಹಾಶಯರು ಆ ಗ್ರಂಥವನ್ನೂ “ರಾಜ್ಯಾಂಗತತ್ತ್ವಗಳು” ಎಂಬ ಗ್ರಂಥವನ್ನೂ ಇದರೊಡನೆ ನೋಡಿದಲ್ಲಿ ಹೆಚ್ಚು ಪ್ರಯೋಜನವಾಗಬಹುದೆಂದು ತಲೆಬಾಗಿ ಬಿನ್ನಯಿಸುತ್ತೇನೆ.