ಈಶೋಪನಿಷತ್ತು ಈಶೋಪನಿಷತ್ತಿನ ೯-೧೧ ನೆಯ ಮಂತ್ರಗಳಲ್ಲಿ (ಪುಟ ೭೮-೭೯, ೯೩) ಬರುವ (i) “ವಿದ್ಯೆ”, “ಅವಿದ್ಯೆ” ಎಂಬ ಪದಗಳ, ಮತ್ತು (ii) ೧೨-೧೪ನೆಯ ಮಂತ್ರಗಳ (ಪುಟ ೮೩, ೯೪) “ಸಂಭೂತಿ”, “ಅಸಂಭೂತಿ” ಎಂಬ ಪದಗಳ ಅರ್ಥವನ್ನು ಕುರಿತು ಪೂರ್ವಕಾಲದಿಂದ ಅಭಿಪ್ರಾಯಭೇದಗಳು ಬಂದಿವೆ. ಈ ಅರ್ಥಭೇದಕ್ಕೆ ಆಯಾ ವ್ಯಾಖ್ಯಾತರು (i) ಕರ್ಮ-ಜ್ಞಾನಗಳ ಮತ್ತು (ii) ಲೌಕಿಕ-ವೈರಾಗ್ಯಗಳ ಪರಸ್ಪರ ಸಂಬಂಧವನ್ನು ಕುರಿತು ಇಟ್ಟುಕೊಂಡಿದ್ದ ಭಾವನಾಭೇದಗಳೇ ಕಾರಣ. ಆ ಎರಾಡು ಜೋಡಿಗಳಲ್ಲಿ ಪ್ರತಿಯೊಂದು ಜೋಡಿಯ ಎರಡಂಶಗಳೂ ಅನ್ಯೋನ್ಯ ವಿರೋಧಿಗಳಲ್ಲ, ಸಹಕಾರಿಗಳು; (i) ಕರ್ಮವು ಜ್ಞಾನಕ್ಕೆ ಮೆಟ್ಟಲು, ಜ್ಞಾನವು ಕರ್ಮಕ್ಕೆ ಫಲ; ಹಾಗೆಯೇ (ii) ಲೌಕಿಕವು ವೈರಾಗ್ಯಕ್ಕೆ ಪೂರ್ವಸಿದ್ಧತೆ; ವೈರಾಗ್ಯವು ಲೌಕಿಕದ ಪುಷ್ಪಸೌರಭ. ಹೀಗೆ ಆ ಜೋಡಿಗಳ ಉಭಯಾಂಶಗಳೂ ವಾಸ್ತವವಾಗಿ ಬೇರೆಬೇರೆಯಲ್ಲ, ಅವು ಕೂಡಿಕೊಂಡೇ ಇರುತ್ತವೆ-ಒಂದೇ ಕೋಲಿನ ಎರಡು ಕೊನೆಗಳಂತೆ. ಪ್ರವೃತ್ತಿ ನಿವೃತ್ತಿಗಳೆರಡೂ ಒಂದೇ ಧರ್ಮದ ಎರಡು ಪಕ್ಕಗಳು: ಹೀಗೆಂಬುದು ಈ ಉಪನಿಷತ್ತಿನ ತಾತ್ಪರ್ಯವೆಂದು ನಾನು ನಂಬಿಕೊಂಡಿದ್ದೇನೆ. ಲೋಕಸಂಪರ್ಕವು ಜೀವಕ್ಕೆ ಸಂಕಟ ಕಷ್ಟಗಳನ್ನು ತಂದು ಜೀವವನ್ನು ಪರೀಕ್ಷೆಗೆ ಗುರಿಪಡಿಸಿ ಶೋಧನೆ ಮಾಡಿಸುತ್ತದೆ. ಹಾಗೆಯೇ ಸುಖಸಂತೋಷಗಳು ಕೂಡ ಜೀವದಲ್ಲಿಯ ಲೋಕಮೈತ್ರಿ, ಜೀವನೋತ್ಸಾಹ ಮೊದಲಾದ ಗುಣಗಳನ್ನು ಉತ್ತೇಜನಪಡಿಸಿ ಸಂಸ್ಕಾರಕಾರಕಗಳಾಗುತ್ತವೆ. ಹೀಗೆ ಲೋಕಜೀವನದಲ್ಲಿ ಮಿಳಿತವಾಗುವುದು ತತ್ತ್ವಜ್ಞಾನಕ್ಕೆ ಅವಶ್ಯವಾದ ಒಂದು ಮನಸ್ಸಂಸ್ಕಾರ. “ಅಸಂಭೂತಿ”, “ಅಸಂಭವ”, “ವಿನಾಶ”-ಈ ಮೂರು ಪದಗಳೂ ಸಮಾನಾರ್ಥಕಗಳಾಗಿ ಪ್ರಯೋಗಿಸಲ್ಪಟ್ಟಿವೆ (ಮಂತ್ರ ೧೨-೧೪). ಆ ಅರ್ಥವು ನಿರ್ದೇಶಿಸುವ ವಸ್ತು ಯಾವುದು? ಆ ವಸ್ತುವು “ಸಂಭೂತಿ”, “ಸಂಭವ”-ಎಂಬುದರಿಂದ ಸೂಚಿತವಾದ ವಸ್ತುವಿಗಿಂತ ಲಕ್ಷಣದಲ್ಲಿ ಬೇರೆಯಾದದ್ದು; ಅದು ಜಗತ್ತು. ಅದರ ವಿಷಯದಲ್ಲಿ ಉಪನಿಷತ್ತು ಇನ್ನೂ ಎರಡು ಮಾತುಗಳನ್ನು ಸೂಚಿಸಿದೆ: (೧) ಆ ವಸ್ತುವನ್ನು ಜನ ಉಪಾಸಿಸುತ್ತಿದ್ದಾರೆ; (೨) ಅದರಿಂದ ಒಳ್ಳೆಯದಾಗುವುದು ಸಾಧ್ಯವಿದೆ. ಅಂಥಾ ವಸ್ತು ಯಾವುದು? ಸ್ವತಂತ್ರವಾದ ಅಸ್ತಿತ್ವವಿಲ್ಲದ್ದು, ವಾಸ್ತವವಾಗಿರದೆ ತೋರಿಕೆಯ ಮಟ್ಟಿಗಿರುವುದು. ನಾಶವಾಗತಕ್ಕದ್ದು; ಜನಕ್ಕೆ ಬೇಕೆನಿಸಿರುವುದು; ಕಿಂಚಿತ್ತು ಉಪಕಾರ ಮಾಡಲೂ ಬಲ್ಲದ್ದು-ಈ ಎಲ್ಲ ಲಕ್ಷಣಗಳೂ ಜಗತ್ತಿನಲ್ಲಿವೆ. ಜಗತ್ತು ಕೇವಲ ಶ್ರೇಷ್ಠವೇನೂ ಅಲ್ಲ: ಆದರೆ ಅದು ಕೇವಲ ತುಚ್ಛವೂ ಅಲ್ಲ. ನಮ್ಮ ಆತ್ಮೋದ್ಧಾರಕ್ಕಾಗಿ ಅದರಿಂದ ದೊರೆಯಬೇಕಾದ ಸಹಾಯವೂ ಒಂದಷ್ಟಿದೆ. ಜಗತ್ತು ಈಶ್ವರನದೆಂಬ ದೃಷ್ಟಿಯಿಂದ ನಾವು ಅದನ್ನು ಕಂಡರೆ ಆಗ ಅದು ನಮಗೆ ಬಂಧನವಾಗಿರುವುದು ಹೋಗಿ ತಾರಕವಾದೀತು-ಎಂಬಿದು ಈಶಾವಾಸ್ಯದ ಉಪದೇಶ.