ಈ ಲೇಖನಗಳು ಆಯಾ ವ್ಯಕ್ತಿಯ ಜೀವನಚರಿತ್ರೆಯಲ್ಲ; ಯೋಗ್ಯತಾ ನಿರ್ಣಯವೂ ಅಲ್ಲ. ಆಯಾ ವ್ಯಕ್ತಿಯ ವಿಷಯದಲ್ಲಿ ನನ್ನ ಮನಸ್ಸು ಗ್ರಹಿಸಲಾದಷ್ಟನ್ನು, ಅದರಲ್ಲಿ ನನ್ನ ನೆನೆಪು ಉಳಿಸಿಕೊಟ್ಟಷ್ಟನನ್ನು, ಲಿಖಿತ ಮಾಡುವುದಷ್ಟೇ ನನ್ನ ಪ್ರಯತ್ನ. ನನಗೆ ತೋರಿದ್ದೇ ಪೂರ್ಣವಲ್ಲ ; ನನ್ನ ಅಭಿಪ್ರಾಯವೇ ತೀರ್ಮಾನವಲ್ಲ. ಬೇರೆ ಅನುಭವಗಳೂ ಬೇರೆ ಅಭಿಪ್ರಾಯಗಳೂ ನಾಲ್ಕಾರಿದ್ದಾವು, ಸಾಧ್ಯವಿರುವ ಹತ್ತು ದೃಷ್ಟಿಗಳಲ್ಲಿ ನನ್ನ ದೃಷ್ಟಿಯೂ ಒಂದು. ನಮ್ಮ ದೇಶದಲ್ಲಿ ಸಾರ್ವಜನಿಕ ವಿಚಾರಗಳಲ್ಲಿ ನಡೆಯುತ್ತಿರುವ ಪ್ರಮಾದಗಳಿಗೆ ಚರಿತ್ರೆಯ ಅಪರಿಚಯವೇ ಮುಖ್ಯ ಕಾರವವೆಂದು ಹೇಳಬಹುದು. ಚರಿತ್ರೆಯೆಂದರೆ ಒಂದು ಪ್ರಶ್ನೆಯ ಹಿನ್ನೆಲೆ. ಆ ಪ್ರಶ್ನೆ ಹೇಗೆ ಹುಟ್ಟಿತು. ಹಿಂದಿನವರು ಆ ಪ್ರಶ್ನೆಯನ್ನು ಹೇಗೆ ಎದುರಿಸಿದರು, ಅವರ ನಡವಳಿಕೆಯಲ್ಲಿ ಇದ್ದ ಮನೋಗತವೇನು, ಆ ನಡವಳಿಕೆ ವ್ಯರ್ಥವಾದದ್ದಕ್ಕೆ ಕಾರಣಗಳೇನು - ಇಂಥ ಅನುಭವ ಪರೀಕ್ಷೆಯೇ ಚರಿತ್ರೆ. ಚರಿತ್ರೆಯನ್ನು ಒಳಹೊಕ್ಕು ವಿಮರ್ಶಿಸಿದರೆ ಹಿಂದೆ ಮಾಡಿದ ತಪ್ಪೇನು ಎಂದು ನಮಗೆ ಎಚ್ಚರಿಕೆ ದೊರೆಯುತ್ತದೆ. ಈಗ ನಾವು ಅಂಥ ತಪ್ಪನ್ನು ಮಾಡದಿರಲು ಯಾವ ಎಚ್ಚರಿಕೆ ಅವಶ್ಯ, ನಾವು ಯಾವ ಹೊಸ ನೀತಿಯನ್ನು ಅವಲಂಬಿಸಿದರೆ ಹಳೆಯ ಅಪಾಯ ನಮಗೆ ತಪ್ಪೀತು ? - ಈ ವಿಧವಾದ ಜಾಗ್ರತೆ ಮತ್ತು ಬೋಧನೆ ನಮಗೆ ಚರಿತ್ರೆಯ ವಿಮರ್ಶನೆಯಿಂದ ಆಗಬಹುದಾದ ಉಪಕಾರ.